ರಾಮನಗರ: ವೇದೋಪನಿಷತ್ತುಗಳಿಂದ ತತ್ವದರ್ಶನವಾಗದಿದ್ದಾಗ ನಾವು ಪುರಾಣಗಳ ಮೊರೆ ಹೋಗಬೇಕಾಗುತ್ತದೆ. ಪುರಾಣಗಳ ಭಾಷೆ ಅತಿಶಯವಾಗಿದೆ. ಆದರೆ ಪುರಾಣವನ್ನ ಶಾಬ್ಧಿಕವಾಗಿ ಸ್ವೀಕರಿಸುವುದು ಪುರಾಣವನ್ನು ಅರ್ಥೈಸಿಕೊಳ್ಳುವ ಸರಿಯಾದ ಮಾರ್ಗವಲ್ಲ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಬೆಂಗಳೂರು ಮಹಾನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಾಂತಾ ನಾಗಮಂಗಲ ಅವರು ಹೇಳಿದ್ದಾರೆ. ಅವರು ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಸೇವಾ ಟ್ರಸ್ಟ್ ಸಹಯೋಗ ಮತ್ತು ಸಹಕಾರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಸ್ವಾಧ್ಯಾಯ ಪ್ರಕಾರದಡಿ ನಡೆದ ಎರಡು ದಿನಗಳ ವಚನ ಭಾಗವತ ಅಧ್ಯಯನ ವರ್ಗದಲ್ಲಿ ದಿಕ್ಸೂಚಿ ಮಾತುಗಳನ್ನು ಆಡಿ ಈ ವಿವರಗಳನ್ನು ಹೇಳಿದರು.

ನಮ್ಮನ್ನು ಮೀರಿದ ಶಕ್ತಿಯು ಬದುಕಿನ ಭರವಸೆಯನ್ನು ನೀಡುತ್ತದೆ. ಈ ಭರವಸೆಯನ್ನು ಪುರಾಣ ಕಟ್ಟಿಕೊಡುತ್ತದೆ. ಪುರಾಣದ ಕೊರತೆಯನ್ನು ನಿವಾರಿಸಲು ಅಮೆರಿಕನ್ನರು ಹ್ಯಾರಿಪಾಟರ್ ಅನ್ನು ಕಟ್ಟಿಕೊಂಡರೆ ನಮ್ಮಲ್ಲಿ ಪುರಾಣಗಳು ಈ ರಾಷ್ಟ್ರದ ಸಂಸ್ಕೃತಿಯನ್ನು ಕಟ್ಟಿಕೊಡುವ ಸಾಹಿತ್ಯದ ಭಾಗವಾಗಿ ಸೇರಿಹೋಗಿವೆ. ಅವುಗಳನ್ನು ಉಪೇಕ್ಷಿಸದೆ ಅಧ್ಯಯನ ಮಾಡುವ ಆವಶ್ಯಕತೆಯಿದೆ ಎಂದವರು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಡಿಜಿಪಿ ಶ್ರೀ ರೇವಣಸಿದ್ದಯ್ಯನವರು ಮಾತನಾಡಿ ಇಂತಹ ಹತ್ತು ಹಲವು ಸಾಹಿತ್ಯ ಕಾರ್ಯಕ್ರಮಗಳು ನಮ್ಮನ್ನು ನಾವು ಸರಿಪಡಿಸಿಕೊಂಡು ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡುತ್ತವೆ. ಸದಾ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕು. ನಮ್ಮ ಪರಂಪರೆಯಿಂದ ಬಂದ ಸಾಹಿತ್ಯವನ್ನು ಹೆಚ್ಚು ತಿಳಿಯಬೇಕು ಎಂದರು. ರಾಮನಗರ ಜಿಲ್ಲಾಧ್ಯಕ್ಷರಾದ ವಿದ್ವಾನ್ ಚಂದ್ರಶೇಖರಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರದ ಟ್ರಸ್ಟಿನ ಕಾರ್ಯದರ್ಶಿಗಳಾದ ಚನ್ನಬಸಪ್ಪನವರು, ಜಂಟಿ ಕಾರ್ಯದರ್ಶಿಯಾದ ಶ್ರೀಮತಿ ಉಮಾರವರು, ಟ್ರಸ್ಟಿಗಳಾದ ವಿರೂಪಾಕ್ಷಪ್ಪನವರು ಉಪಸ್ಥಿತರಿದ್ದರು.
ಕಥೆಗಳು ಉಸಿರಾಟದಷ್ಟೇ ಸಲೀಸು
ಸಮಾರೋಪದಲ್ಲಿ ಚಿಂತಕ ಪತ್ರಕರ್ತ ಸೂರ್ಯಪ್ರಕಾಶ ಪಂಡಿತ್ ಮಾತನಾಡಿ, ಪುರಾಣದ ಕಥೆಗಳು ನಮಗೆ ಉಸಿರಾಟದಷ್ಟೇ ಸಲಿಸಾಗಿದ್ದು ನಮ್ಮಲ್ಲಿ ಸಾಕಷ್ಟು ಮಂದಿ ರಾಮಾಯಣ ಮಹಾಭಾರತದ ಕಥೆ ಓದಿಲ್ಲವಾದರೂ ರಾಮನ ಕಥೆ, ಕೃಷ್ಣನ ಕಥೆಗಳೆಲ್ಲವೂ ಗೊತ್ತಿವೆ. ಆದರೆ ಈಗೀಗ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿದ್ದು ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋದಂತೆ, ಇಂತಹ ಅಧ್ಯಯನ ವರ್ಗಗಳು ಆವಶ್ಯಕ ಎಂದರು.
ಚರ್ಚೆ ಸಂವಾದದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಅಧ್ಯಯನಕಾರರು ಕಥೆಯನ್ನು ಪ್ರಸ್ತುತಪಡಿಸಿ ಅದರಲ್ಲಿ ತಾವು ಕಂಡುಕೊಂಡ ಹೊಳಹುಗಳ ಕುರಿತಾಗಿ ಚರ್ಚಿಸಿದರು. ರಾಜ್ಯದೆಲ್ಲೆಡೆಯಿಂದ ಬಂದ ವಿನುತ, ಪವಿತ್ರ, ಪ್ರಭಾಕರ, ಮಂಜೇಶ್ ಕುಮಾರ್, ಶಿವಕುಮಾರ್ ಎ.ಬಿ, ಚಂದ್ರಕಲಾ ಚಂದ್ರಿಕಾ, ನಾಗೇಶ್, ಸುಮಂಗಲ, ಶಿವಕುಮಾರ್, ಜಯಂತ್, ಪ್ರೇಮದೇವಿ, ಅಶ್ವತ್ಥನಾರಾಯಣ, ಸುನಿಲ್ ಕುಮಾರ್, ನಾಗಶ್ರೀ, ಸುಂದರಶೆಟ್ಟಿ, ಕನ್ಯಾಕುಮಾರಿ, ಸುನಂದ, ರೂಪಶ್ರೀ, ಸರ್ವ ಮಂಗಳ ನಾಡಿಗ್ ವಿಚಾರ ಮಂಡಿಸಿದರು. ಸಾಮಾಜಿಕ ಕಾರ್ಯಕರ್ತರಾದ ಲೋಹಿತಾಶ್ವ ಕೇದಿಗೆರೆ ಅವಲೋಕನ ಮಾಡಿದರು. ರಾಮನಗರ ಜಿಲ್ಲಾ ಸಮಿತಿ ಕಾರ್ಯದರ್ಶಿ ವೇಣುಗೋಪಾಲ. ಎನ್ ವಂದಿಸಿದರು.