“ಕನಕದಾಸರ ಒಂದೊಂದು ಕೀರ್ತನೆಗಳೂ ಜೀವನವನ್ನು ಹೇಗೆ ಹಸನಾಗಿ ರೂಪಿಸಬಹುದೆಂದು ತಿಳಿಸುತ್ತದೆ.ಆ ಕೀರ್ತನೆಗಳು ಭಕ್ತಿಯನ್ನು ಸ್ಫುರಿಸುವಂತೆ ಮಾಡುವುದರೊಂದಿಗೆ ಜೀವನದ ವಿವಿಧ ಮಜಲುಗಳನ್ನು ಚಿತ್ರಿಸುತ್ತದೆ” ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ಪ್ರೊ| ಗಣಪತಿ ಭಟ್ ಕುಳಮರ್ವ ಇವರು ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಸಂಸ್ಕೃತ ಸಂಘ,ಲಲಿತ ಕಲಾ ಸಂಘ,ಐಕ್ಯೂಎಸಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಸಹಯೋಗದಲ್ಲಿ ನಡೆದ ಕನಕದಾಸ ಜಯಂತಿ ದಾಸ ಸಾಹಿತ್ಯ- ಒಳನೋಟಗಳು ಎಂಬ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಸಂಚಾಲಕರಾದ ಮುರಳೀಕೃಷ್ಣ ಕೆ.ಎನ್ ಉದ್ಘಾಟಿಸಿದರು.
ಅನಂತರ ಮಾತಾಡಿದ ಅವರು “ವಿದ್ಯಾಲಯದಲ್ಲಿ ಕನಕದಾಸ ಜಯಂತಿಯನ್ನು ಇನ್ನು ನಿರಂತರವಾಗಿ ನಡೆಸಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಮೌಲ್ಯಗಳನ್ನು ತಿಳಿಸಲಾಗುವುದು” ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಅಧ್ಯಕ್ಷರಾದ ಗಣರಾಜ ಕುಂಬ್ಳೆ ಅಧ್ಯಕ್ಷತೆಯನ್ನು ವಹಿಸಿದ್ದರು
ಕಾಲೇಜಿನ ಪ್ರಾಂಶುಪಾಲ ಪ್ರೊ| ವಿಷ್ಣು ಗಣಪತಿ ಭಟ್ ಸ್ವಾಗತಿಸಿ ಕನ್ನಡ ವಿಭಾಗದ ಮುಖ್ಯಸ್ಥ ಮನಮೋಹನ ಎಂ ವಂದಿಸಿದರು.
ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಚಂದನಾ ಕೆ.ಎಸ್ ನಿರೂಪಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಗೋಷ್ಠಿ ನಡೆಯಿತು.
ವಿದ್ಯಾರ್ಥಿಗೋಷ್ಠಿಯಲ್ಲಿ “ಪಾಶ್ಚಾತ್ಯ ಚಿಂತಕರು ಪ್ರತಿಪಾದಿಸಿದ ಸಿದ್ಧಾಂತಗಳಲ್ಲಿ ಅಡಕವಾದ ವಿಷಯಗಳನ್ನು ಅದಕ್ಕಿಂತಲೂ ಮೊದಲೇ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ವ್ಯಕ್ತಪಡಿಸಿದ್ದರು” ಎಂದು ತೃತೀಯ ವಾಣಿಜ್ಯ ವಿದ್ಯಾರ್ಥಿ ನವೀನಕೃಷ್ಣ ಎಸ್ ಹೇಳಿದರು.
ಈ ಗೋಷ್ಠಿಯಲ್ಲಿ ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ದೀಪ್ತಿ ಅಡ್ಡಂತಡ್ಕ ಮಾತನಾಡಿ ” ಕನಕದಾಸರ ಕೀರ್ತನೆಗಳಲ್ಲಿ ಭಕ್ತನು ಪರಮಾತ್ಮನ ಮೇಲಿಡಬೇಕಾದ ಭಕ್ತಿ ಹೇಗಿರಬೇಕೆಂದು ಹೇಳಲಾಗಿದೆ.ನಿಷ್ಕಲ್ಮಷವಾದ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದಾಗಿದೆ” ಎಂದರು.
ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಸಂಶೀನಾ ಮಾತನಾಡಿ ” ಕನಕದಾಸರು ಸಾಮಾಜಿಕವಾಗಿ ರೂಢಿಯಲ್ಲಿರುವ ತಾರತಮ್ಯವನ್ನು ಖಂಡಿಸಿ ಎಲ್ಲರ ಬದುಕು ಹಸನಾಗಿರಬೇಕು ಎಂದು ಆಶಿಸಿದ್ದರು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಕಾರ್ಯದರ್ಶಿ ಸತೀಶ್ ಇರ್ದೆ ವಹಿಸಿದ್ದರು.
ತೃತೀಯ ಕಲಾವಿಭಾಗದ ಅನನ್ಯ ಕೆ.ವಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಮುಂದೆ ವಿದ್ವತ್ ಗೋಷ್ಠಿ ನಡೆಯಿತು.
ವಿದ್ವತ್ ಗೋಷ್ಠಿಯಲ್ಲಿ
“ಸಿಹಿಯ ಸಲುವಾಗಿ ಮಾವಿನ ಮರದ ಅಡಿಗೆ ಹೋಗುವ ಗೋವಿನಂತೆ ನಾವಾಗಬೇಕು,ಅದಕ್ಕೆ ಮಾರ್ಗವಾಗಿ ದಾಸಸಾಹಿತ್ಯದ ಕೀರ್ತನೆಗಳನ್ನು ಬಳಸಬೇಕು” ಎಂದು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ| ಶ್ರೀಶ ಕುಮಾರ ಎಂ.ಕೆ ಹೇಳಿದರು.ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಗೌರವಾಧ್ಯಕ್ಷ ವಿ.ಬಿ ಅರ್ತಿಕಜೆ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕ ಮಧುಕರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ದಾಸರ ಕೀರ್ತನೆಗಳು ಪ್ರಸ್ತುತಿಗೊಂಡಿತು.
ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಅಪರಾಹ್ನ ನಡೆಯಿತು.
ಸಮಾರೋಪದ ಅಧ್ಯಕ್ಷತೆಯನ್ನು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಶ್ರೀಪತಿ ಕಲ್ಲೂರಾಯ ವಹಿಸಿದ್ದರು.
ಸಮಾರೋಪ ಭಾಷಣವನ್ನು ಮಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದ.ಕ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಬಿ ಹರೀಶ್ ರೈ “ಅಸ್ಪೃಶ್ಯತೆಯನ್ನು ನೀಗಿಸುವಲ್ಲಿ ದಾಸವರೇಣ್ಯರ ಪ್ರಭಾವ ಮಹತ್ವದ್ದಾಗಿದೆ. ಕನಕ ಹಾಗೂ ಪುರಂದರದಾಸರು ಎಲ್ಲಾ ಜಾತಿ ಧರ್ಮದವರನ್ನು ಸಮನಾಗಿ ಕಾಣಬೇಕೆಂದೂ ಪ್ರೇರೇಪಿಸಿದ್ದರು” ಎಂದರು.
ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ದಾಸ ಗೌರವ ಸನ್ಮಾನ ನಡೆಯಿತು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಅಧ್ಯಕ್ಷ ಗಣರಾಜ ಕುಂಬ್ಳೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಲಲಿತ ಕಲಾ ಸಂಘದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಸ್ವಾಗತಿಸಿ ಕನ್ನಡ ವಿಭಾಗದ ಮುಖ್ಯಸ್ಥರಾದ ಮನಮೋಹನ ಎಂ ವಂದಿಸಿದರು.
ಕನ್ನಡ ವಿಭಾಗದ ಉಪನ್ಯಾಸಕಿ ಮೈತ್ರಿ ಭಟ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವಿಭಾಗ ಸಂಯೋಜಕ ಸುಂದರ ಶೆಟ್ಟಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇದರ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಇತರರು ಉಪಸ್ಥಿತರಿದ್ದರು