ಸಂಪನ್ನಗೊಂಡ ಅಭಾಸಾಪ ಕಾರ್ಯಕರ್ತ ಪ್ರಬೋಧನ ಕಾರ್ಯಶಾಲಾ

ಭುವನೇಶ್ವರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಅಖಿಲ ಭಾರತ ಮಟ್ಟದ ಮೂರು ದಿನಗಳ ಕಾರ್ಯಶಾಲೆಯು ಇಂದು (೨೧ ನವೆಂಬರ್ ೨೦೨೩) ಸಮಾಪನಗೊಂಡಿತು.

ಬೆಳಗ್ಗೆ ಪ್ರಾರಂಭಗೊಂಡ ಮೊದಲ ಅವಧಿಯಲ್ಲಿ ಅಭಾಸಾಪ ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ಸಾಧನಾ ಬಲವಟೆ ಅವರು ಅಭಾಸಾಪ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಭಾಸಾಪ ಹೊರತರುವ ‘ಸಾಹಿತ್ಯ ಪರಿಕ್ರಮಾ’ ತ್ರೈಮಾಸಿಕ ಹಿಂದಿ ಸಾಹಿತ್ಯ ಪತ್ರಿಕೆಯ ಚಂದಾದಾರಿಕೆ, ಮೂರು ವಾರ್ಷಿಕ ಕಾರ್ಯಕ್ರಮಗಳು (ಯುಗಾದಿ ವ್ಯಾಸಜಯಂತಿ ವಾಲ್ಮೀಕಿಜಯಂತಿ), ತ್ರೈವಾರ್ಷಿಕ ಅಧಿವೇಶನ, ಸಂಗೋಷ್ಠಿ, ಸಾಹಿತ್ಯ ಸಂವರ್ಧನ ಯಾತ್ರೆ ಇವು ಅಭಾಸಾಪ ನಡೆಸುವ ಪ್ರಮುಖ ಕಾರ್ಯಚಟುವಟಿಕೆಗಳು ಎಂದು ಅವರು ಮಾಹಿತಿ ನೀಡಿದರು.

ಎರಡನೆಯ ಅವಧಿಯಲ್ಲಿ ‘ಅಭಾಸಾಪ’ದ ಆಯಾಮ ಮತ್ತು ಲಕ್ಷ್ಯದ ಬಗ್ಗೆ ಮಾತನಾಡಿದ ಅಭಾಸಾಪ ರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್ ‘ಕಾರ್ಯಕರ್ತ ಪ್ರಬೋಧನ ವರ್ಗದ ಉದ್ದೇಶ ಕಾರ್ಯಕರ್ತರನ್ನು ವೈಚಾರಿಕವಾಗಿ ಸುಪುಷ್ಟಗೊಳಿಸುವುದಾಗಿದೆ’ ಎಂದರು. “ನಮ್ಮ ಸಾಹಿತ್ಯ ಬರೆಹದ ಉದ್ದೇಶವು ಸಮಾಜದ ಹಿತಸಾಧನೆ, ಸತ್ಯದ ಕುರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದಾಗಿದೆ. ಪರಕೀಯ ದಾಳಿಯ ನಿಜ ಚಿತ್ರಣವನ್ನು ಸಾಹಿತ್ಯದ ಮೂಲಕ ಕಟ್ಟಿಕೊಡಬೇಕು. ವಸಾಹತುಮಾನಸಿಕತೆಯಿಂದ ಸಮಾಜವನ್ನು ಮುಕ್ತಗೊಳಿಸುವುದು ನಮ್ಮ ಬರೆಹದ ಲಕ್ಷ್ಯವಾಗಿದೆ. ಕತ್ತಿಯಿಂದ ಸಾಧಿಸಲಾಗದ್ದನ್ನು ಇದೀಗ ವಿಕೃತ ವಿಚಾರಗಳಿಂದ ವಿರೋಧಿಗಳು ಸಾಧಿಸುತ್ತಿದ್ದಾರೆ. ಸಾಹಿತ್ಯದ ಮೂಲಕ ಇಂಥ ವಿಕೃತ ಯತ್ನಗಳನ್ನು ನಷ್ಟಗೊಳಿಸಿ ಸಮಾಜವನ್ನು ಸಶಕ್ತಗೊಳಿಸಬೇಕು” ಎಂದು ಅವರು ಹೇಳಿದರು.

ಸಮಾರೋಪ ಮಾತುಗಳನ್ನು ಆಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಬೌದ್ಧಿಕ ಪ್ರಮುಖರಾದ ಶ್ರೀ ಸ್ವಾಂತರಂಜನ್‌ಜೀ ಅವರು, “ಕಾರ್ಯವಿಸ್ತಾರ, ಕಾರ್ಯದ ಗುಣಮಟ್ಟದ ವರ್ಧನೆ, ಸಾಮಾಜಿಕ ಪರಿವರ್ತನೆ (ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಪರ್ಯಾವರಣ ಸಂರಕ್ಷಣೆ, ಸ್ವದೇಶೀ ಬಳಕೆ, ನಾಗರಿಕ ಕರ್ತವ್ಯಗಳ ಪಾಲನೆ) ಇವುಗಳನ್ನು ನಾವು ನಮ್ಮ ಸಂಘಟನಾತ್ಮಕ ಸಾಮಾಜಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಜಾರಿಯಾಗುವಂತೆ ಪ್ರಯತ್ನವಿರಬೇಕು. ಅರಾಷ್ಟ್ರೀಕರಣ, ಅಹಿಂದುಕರಣ ಇವುಗಳ ಬಗ್ಗೆ ಜಾಗೃತಿ ಆಗಬೇಕು” ಎಂದರು.
ಕಥನದ ಆವಶ್ಯಕತೆ ಬಗ್ಗೆ ಮಾತನಾಡಿದ ಅವರು; ಭಾರತ, ಹಿಂದುತ್ವ, ಸ್ವ ಗಳ ಬಗ್ಗೆ ಅಧ್ಯಯನ, ಕ್ರೈಸ್ತ-ಇಸ್ಲಾಂ-ಎಡಶಕ್ತಿಗಳ ಬಗ್ಗೆ, ಜಾಗತಿಕ ಮಾರುಕಟ್ಟೆ ಬಗ್ಗೆ ಮಾಹಿತಿ ಜಾಗೃತಿ, ಸಜ್ಜನಶಕ್ತಿಯ ಜಾಗರಣ; ಈಯೆಲ್ಲ ನಿಟ್ಟಿನಲ್ಲಿ ನಮ್ಮ ಕಾರ್ಯ ಸಾಗಬೇಕು ಎಂದು ವಿವರಿಸಿದರು.

ಭಾರತೀಯತೆಯು ನಮ್ಮ ಬರೆಹದಲ್ಲಿ ಅಭಿವ್ಯಕ್ತಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಭಾಸಾಪ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಶ್ರೀಧರ ಪರಾಡ್ಕರ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ‘ಅಭಾಸಾಪ ಕರ್ನಾಟಕ’ದ ನಿಕಟಪೂರ್ವ ಅಧ್ಯಕ್ಷರಾದ ಪ್ರೊ. ಪ್ರೇಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಂದನ ಭಟ್, ರಾಜ್ಯ ಕಾರ್ಯದರ್ಶಿ ಶ್ರೀ ಶೈಲೇಶ್, ವಿಭಾಗ ಸಂಯೋಜಕರಾದ ಶ್ರೀ ಸುಂದರ ಶೆಟ್ಟಿ, ಶ್ರೀಹರ್ಷ ಹೊಸಳ್ಳಿ ಹಾಗೂ ಶ್ರೀ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *