ಡಾ. ವಿ. ಬಿ. ಆರತಿ ಅವರು ಬಹುಮಾನ ವಿತರಣೆ ಮಾಡಿದರು

ಪಂಚತಂತ್ರ ಕಥೆಗಳು ಕೇವಲ ಕಥೆಗಳಲ್ಲ, ಅವು ಜೀವನ ಮೌಲ್ಯಗಳು. ಅವುಗಳನ್ನು ಜೀವನಕ್ಕೆ ಅನ್ವಯ ಮಾಡಿಕೊಂಡರೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಜೀವನದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಎಲ್ಲಿ ಹೇಗಿರಬೇಕು ಎಂಬ ಪ್ರಜ್ಞೆ ಬೆಳೆಯುತ್ತದೆ ಎಂದು ವಿಭು ಅಕಾಡೆಮಿ ಸಂಸ್ಥಾಪಕಿ ಡಾ. ವಿ ಬಿ ಆರತಿ ಅವರು ಕಾರ್ಯಕ್ರಮದಲ್ಲಿ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರದಿಂದ ಆಯೋಜಿಸಿದ್ದ ಪ್ರೌಢಶಾಲಾ ಮಕ್ಕಳಿಗಾಗಿ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯ ವಿಜೇತರಿಗೆ ಎನ್.ಆರ್. ಕಾಲೋನಿಯ ಸಿ.ಅಶ್ವತ್ಥ್ ಕಲಾಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ನಾವು ಪಡೆಯುತ್ತಿರುವ ಶಿಕ್ಷಣ ಭಾರತೀಯ ಶಿಕ್ಷಣವಲ್ಲ. ಇದು ಮೆಕಾಲೆ ಪದ್ಧತಿಯ ಶಿಕ್ಷಣ. ಭಾರತೀಯರಲ್ಲಿ ಗುಲಾಮಿ ಮನಸ್ಥಿತಿಯನ್ನು ನಿರ್ಮಿಸುವ ಉದ್ದೇಶದಿಂದ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದಿತು. ಭಾರತೀಯ ಶಿಕ್ಷಣ ಮರೆಯಾಯಿತು. ಭಾರತಕ್ಕೆ ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ನಾವು ಇದರಿಂದ ಹೊರಬಂದಿಲ್ಲ. ನಮ್ಮಲ್ಲಿ ಶಿಕ್ಷಣ ಕಥೆಯಿಂದಲೇ ಆರಂಭವಾಗಿ ಕಥೆಯಿಂದಲೇ ಮುಕ್ತಾಯವಾಗುತ್ತಿತ್ತು. ವೇದ‌, ಮಹಾಭಾರತ, ರಾಮಾಯಣ, ಪಂಚತಂತ್ರ ಕಥೆಗಳ ಮೂಲಕ ರಾಜನೀತಿ, ಸಾಮಾಜಿಕ ನೀತಿ, ಸಾಮಾಜಿಕ ಪ್ರಜ್ಞೆಗಳನ್ನು ಬೆಳೆಸಲಾಗುತ್ತಿತ್ತು. ಮರೆಯಾಗಿರುವ ಈ ಶಿಕ್ಷಣ ಕ್ರಮವನ್ನು ಮತ್ತೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

“ವಸುದೈವ ಕುಟುಂಬಕಂ”ಎಂಬುದು ಪಂಚತಂತ್ರದಲ್ಲಿ ನರಿ ಹೇಳುವ ಮಾತು. ತನ್ನ ಎದುರಿನ ಪ್ರಾಣಿಯನ್ನು ಮೋಸಗೊಳಿಸಲು ಕುಟಿಲತೆಯಿಂದ ಅದು ಆ ಮಾತನ್ನು ಹೇಳುತ್ತದೆ. ಆದರೆ ಆ ಸಂದರ್ಭವನ್ನು ಅರ್ಥ ಮಾಡಿಕೊಳ್ಳದೆ ಇಡೀ ಜಗತ್ತೇ ಒಂದು ಕುಟುಂಬ ಎಂದು ನಂಬಿ ಮೋಸ ಹೋಗುತ್ತಿದ್ದೇವೆ. ಕೇಂದ್ರ ಸರ್ಕಾರ ಕೂಡ ಅದನ್ನು ಘೋಷವಾಕ್ಯವೆಂದು ಪರಿಗಣಿಸಿದೆ. ಆದರೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಸ್ವಂತ ಪ್ರಜ್ಞೆಯನ್ನು ನಮ್ಮ ವೇದ, ಉಪನಿಷತ್ತು, ಭಗವದ್ಗೀತೆಗಳು ತಿಳಿಸುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ನಾವಿಂದು ವಿಕಿಪೀಡಿಯವನ್ನು ನಂಬುತ್ತೇವೆ. ನಮ್ಮ ಅಜ್ಜಿ ತಾತರನ್ನು ನಂಬುವುದಿಲ್ಲ. ಬಾಲಿವುಡ್ ನಟ ನಟಿಯರ ಮಾತುಗಳನ್ನು, ಸಿನಿಮಾಗಳನ್ನು, ಜಾಹೀರಾತುಗಳನ್ನು ನಂಬುತ್ತೇವೆ. ನಮ್ಮ ವೇದ ಪರಂಪರೆಯನ್ನು ನಂಬುವುದಿಲ್ಲ. ಇಂಗ್ಲಿಷ್ ನಲ್ಲಿ ಹೇಳಿದ್ದೆಲ್ಲವೂ ಸತ್ಯ ಎಂದು ನಂಬುತ್ತೇವೆ. ಆದರೆ ನಮ್ಮ ಭಾಷೆ, ಸಂಸ್ಕೃತಿಗಳನ್ನು ನಂಬಿ ಗೌರವಿಸುವುದಿಲ್ಲ. ಈ ಮನಸ್ಥಿತಿಯಿಂದ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶದ ಸಂಸ್ಕೃತಿಗೆ ನಾವು ರಾಯಭಾರಿಗಳಾಗಬೇಕು. ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕು. ಇಂದು ಸಣ್ಣ ಸಣ್ಣ ಕಾರಣಗಳಿಗಾಗಿ ಆತ್ಮಹತ್ಯೆ ಹೆಚ್ಚುತ್ತಿದೆ. ಯುವಜನರು ದುರ್ಬಲ ಮನಸ್ಥಿತಿಗೆ ಜಾರುತ್ತಿದ್ದಾರೆ. ದೈಹಿಕ ಬಲವು ಕುಂದುತ್ತಿದೆ. ಇವುಗಳಿಂದ ಹೊರಬಂದು ಶಕ್ತ ಸಮಾಜವನ್ನು, ದೇಶವನ್ನು ಕಟ್ಟಬೇಕು. ಪಂಚತಂತ್ರದಂತ ಪ್ರಾಚೀನ ಗ್ರಂಥಗಳಲ್ಲಿ ವ್ಯಕ್ತಿ ನಿರ್ಮಾಣಕ್ಕೆ ಬೇಕಾದ ಮೌಲ್ಯಗಳಿವೆ. ವಿದ್ಯಾರ್ಥಿಗಳು ಕೇವಲ ಸ್ಪರ್ಧೆಗೆ ಪಂಚತಂತ್ರದ ಕಥೆಗಳನ್ನು ಸೀಮಿತಗೊಳಿಸದೆ, ಅವನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿಗಳು ಹಾಗೂ ಜೆಸ್ಟ್ ಬುಕ್ಸ್ ಮಾಲೀಕರಾದ ಸುರೇಶ್ ನರಸಿಂಹ ಅವರು ಮಾತನಾಡಿ, ಶಿಕ್ಷಣ ಮತ್ತು ನಿಸ್ವಾರ್ಥ ಸೇವೆ ಇವೆರಡು ಉದ್ಯಮಿಗಳಲ್ಲಿ ಇರಬೇಕಾದ ಗುಣಗಳು, ಆದರೆ ಇಂದಿನ ಉದ್ಯಮಿಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮಕ್ಕಳಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪೋಷಕರೇ ಹೊಣೆಗಾರರು. ಪೋಷಕರು ಎಲ್ಲಿಯವರೆಗೆ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ, ಸಾಹಿತ್ಯಗಳ ಪರಿಚಯ ಮಾಡಿಕೊಡುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಜೀವನದಲ್ಲಿ ಮುಖ್ಯವಾದದ್ದು ಕೇವಲ ಅಂಕಗಳಲ್ಲ, ಮೌಲ್ಯಗಳು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದರು.

ಮಕ್ಕಳು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಓದುವ ಹವ್ಯಾಸದಿಂದ ಜ್ಞಾನ, ತಾಳ್ಮೆ, ಸಂಯಮಗಳು ವೃದ್ಧಿಯಾಗುವುದಲ್ಲದೆ ದುರ್ಬಲ ಮನಸ್ಥಿತಿ ದೂರವಾಗುತ್ತದೆ. ಅಭಾಸಾಪ ಆಯೋಜಿಸಿದ ಈ ಸ್ಪರ್ಧೆಯ ಉದ್ದೇಶವೇ ಮಕ್ಕಳಲ್ಲಿ ಓದುವಿಕೆಯನ್ನು ಬೆಳೆಸುವುದು. ಮಕ್ಕಳು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಭಾಸಾಪ ಬೆಂಗಳೂರು ದಕ್ಷಿಣ ಜಿಲ್ಲ ಅಧ್ಯಕ್ಷರಾದ ಡಾ. ಎ ಭಾನು, ಹಿರಿಯ ಪತ್ರಕರ್ತರು ಹಾಗೂ ಅಭಾಸಾಪ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಡಿಎಂ ಘನಶಾಮ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಾಸಾಪ ಬೆಂಗಳೂರು ಮಹಾನಗರ ಸಂಯೋಜಕರಾದ ಚಂದ್ರಶೇಖರ್ ಮೈಸೂರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಪರಿಚಯ ಮಾಡಿಕೊಟ್ಟರು. ಅಭಾಸಾಪ ರಾಜ್ಯ ಸಹ ಖಜಂಚಿಗಳಾದ ಭ. ರ. ವಿಜಯ್ ಕುಮಾರ್ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯ ಉದ್ದೇಶವನ್ನು ವಿವರಿಸಿದರು. ಅಭಾಸಾಪ ಬೆಂಗಳೂರು ಉತ್ತರ ಕಾರ್ಯದರ್ಶಿ ಸಚಿನ್ ಮುಂಗಿಲ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಭಾವನ. ಬಿ ಅವರು ಪ್ರಾರ್ಥನ ಗೀತೆಯನ್ನು ಹಾಡಿದರು. ಅಭಾಸಾಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿಗಳಾದ ನವೀನ್ ಗಂಗೋತ್ರಿ ಅವರು ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ಅಭಾಸಾಪ ಬೆಂಗಳೂರು ಮಹಾನಗರ ಕಾರ್ಯದರ್ಶಿಗಳಾದ ರಮೇಶ್ ದೊಡ್ಡಪುರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Leave a Reply

Your email address will not be published. Required fields are marked *