
ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯ ಲೋಕದ ಭಾವಜನಲ ಬತ್ತಿಹೋಗಿದ್ದು, ಸ್ನೇಹ ಎನ್ನುವುದು ಬಳಸಿ ಬಿಸಾಡುವ ವಸ್ತುವಾಗಿದೆ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ. ಹರೀಶ ಬೇಸರ ವ್ಯಕ್ತಪಡಿಸಿದ್ದಾರೆ
ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ) ಬೆಂಗಳೂರು ಮಹಾನಗರ (ಗ್ರಾಮಾಂತರ ಜಿಲ್ಲೆ) ವತಿಯಿಂದ ದೊಡ್ಡಬಳ್ಳಾಪುರದ ಮಂಗಳ ವಿದ್ಯಾಮಂದಿರದಲ್ಲಿ ಆಯೋಜಿಸಿದ್ದ ‘ನಾಕುತಂತಿ ಷಷ್ಟಿಪೂರ್ತಿ’ ಸರಣಿಯ ‘ನಾದ-2’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರೀತಿ ನವೀನ್ ಅವರಿಂದ ‘ನಾಕುತಂತಿ’ ಕಾವ್ಯಗಾಯನ
ಅಧ್ಯಾತ್ಮಿಕ ನೆಲೆಯಲ್ಲಷ್ಟೆ ಅಲ್ಲದೇ ಸಾಮಾಜಿಕ ನೆಲೆಯಲ್ಲೂ ಬೇಂದ್ರೆ ಕಾವ್ಯ ಪ್ರಮುಖವಾಗುತ್ತದೆ. ವಿವಿಧ ನಂಬಿಕೆಗಳ, ಸಂಪ್ರದಾಯಗಳವರು ಅವರಪಾಡಿಗೆ ಅವರಿದ್ದರೆ ಎಲ್ಲರೂ ಒಂದಾಗುವುದು ಯಾವಾಗ? ನಾನು, ನೀನು, ಆನು, ತಾನು ಎನ್ನುವುದನ್ನೇ ಈ ದೃಷ್ಟಿಯಿಂದ ಓದಿದರೆ ಅದರಲ್ಲಿ ಸಾಮರಸ್ಯದ ಸಂದೇಶ ದೊರಕುತ್ತದೆ.
ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮ ಜಿಜ್ಞಾಸುಗಳಿಗೆ ಅಧ್ಯಾತ್ಮದಂತೆ, ಪ್ರೇಮಿಗಳಿಗೆ ಪ್ರೇಮಕವಿತೆಯಂತೆ ಕಾಣುತ್ತದೆ. ಒಂದೇ ಕವನದಲ್ಲಿ ಒಂದೇ ವಿಷಯವನ್ನು ಇರಿಸಿಕೊಂಡು ಬರೆಯುವುದಿಲ್ಲ.
ಜಗತ್ತಿನ ಸರ್ವ ಸಾಹಿತ್ಯಕ್ಕೆ ಬೇಕಾದ ಎಲ್ಲ ಅಂಶಗಳೂ ಕನ್ನಡ ಸಾಹಿತ್ಯದಲ್ಲಿದೆ, ಎಲ್ಲ ಭಾಷೆಗಳಿಗೂ ಕೊಡಬಲ್ಲಷ್ಟು ಸಂಪತ್ತು ನಮ್ಮ ಭಾಷೆಯಲ್ಲಿದೆ ಎಂದರು.

ಶ್ರೀಮತಿ ಯಶೋಧಾ, ಶಾಲಾ ಶಿಕ್ಷಕರು, ಇವರಿಂದ ‘ಅಣು-ಮಹತ್’ ಕವನ ವಾಚನ
ಬೇಂದ್ರೆಯವರು ತತ್ತ್ವಜ್ಞಾನಿಯಾಗಿ ಲೋಕವನ್ನು ನೋಡುತ್ತಾರೆ. ಇತಿಹಾಸವನ್ನು ಅವರು ಕೇವಲ ಪುಸ್ತಕ, ಸಾಹಿತಿಗಳ ಆಧಾರದಲ್ಲಿ ನೋಡದೆ ಬುದ್ಧನ ಹಿನ್ನೆಲೆಯಾಗಿಟ್ಟುಕೊಂಡು ಮಾತನಾಡುತ್ತಾರೆ.
ಇಷ್ಟೆಲ್ಲ ವೈವಿಧ್ಯತೆ ಹೊಂದಿದ್ದ ಬೇಂದ್ರೆಯು, ಜೀವನದಲ್ಲಿ ಬಡವರಾಗಿದ್ದರೂ ಸ್ನೇಹದಲ್ಲಿ ಶ್ರೀಮಂತರು. ಎಂದಿಗೂ ಶುದ್ಧ ಸ್ನೇಹಕ್ಕಾಗಿಯೇ ಸ್ನೇಹಿತರೊಂದಿಗೆ ಒಡನಾಡಿದವರು. ದೇವುಡು, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೆಳಗೆರೆ ಜಾನಕಮ್ಮನವರೆಗೆ ಅನೇಕರು ನಿಧನರಾದ ಕವಿತೆಗಳನ್ನು ಬೇಂದ್ರೆ ಬರೆದಿದ್ದಾರೆ. ಅವರಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಯಾವ ಭೇದವೂ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ವಿಭಿನ್ನವಾಗಿದೆ.

ಶ್ರೀಮತಿ ಪ್ರಭಾ, ನಿವೃತ್ತ ಉಪನ್ಯಾಸಕರು, ಇವರಿಂದ ‘ತಮ್ಮನೆನೆವ’ ಕವನ ವಾಚನ
ಯು.ಆರ್. ಅನಂತಮೂರ್ತಿ, ಡಿ.ಆರ್. ನಾಗರಾಜ್, ಲಂಕೇಶ್, ಚೆನ್ನವೀರ ಕಣವಿಯವರು ನಿಧನರಾದಾಗ ಯಾರೂ ಕವಿತೆ ಬರೆದಿದ್ದನ್ನು ನೋಡಿಲ್ಲ. ಇದೆಲ್ಲವನ್ನೂ ನೋಡಿದಾಗ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಎಲ್ಲೋ ದಾರಿತಪ್ಪಿದೆ ಎನ್ನಿಸುತ್ತದೆ. ಭಾವಶುದ್ಧತೆ ಶುಷ್ಕವಾಗಿದೆ. ಎಲ್ಲ ಕಾಲದ ಕಾವ್ಯ ಪ್ರಕಾರಗಳಲ್ಲೂ ಈ ವ್ಯಾಧಿ ಆವರಿಸಿದೆ. ಸ್ನೇಹವನ್ನು ಎಷ್ಟು ಬೇಕೊ ಅಷ್ಟಕ್ಕೆ ಬಳಸಿಕೊಂಡು ಬಿಸಾಡುವಂತಾಗಿದೆ. ಸಾಂಸ್ಕೃತಿಕ ಅನಕ್ಷರತೆಯಿಂದ ಬಳಲುತ್ತಿದ್ದೇವೆಯೇ ಎಂಬ ಬೇಸರವಾಗುತ್ತದೆ ಎಂದರು.

ಶ್ರೀಮತಿ ಸ್ಮಿತಾ, ದೊಡ್ಡಬಳ್ಳಾಪುರ ವಾಣಿಜ್ಯ ತೆರಿಗೆ ಅಧಿಕಾರಿಗಳು, ಇವರಿಂದ ‘ದೇವುಡು’ ಕವನ ವಾಚನ
ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಹಾಸ್ಯ ಸಾಹಿತಿ ಹಾಗೂ ಅಭಾಸಾಪ ಬೆಂಗಳೂರು ಮಹಾನಗರ ಅಧ್ಯಕ್ಷರಾದ ಎಂ.ಎಸ್. ನರಸಿಂಹಮೂರ್ತಿ ಅವರು ಮಾತನಾಡಿ, ಜೀವನದಲ್ಲಿ ಬೇಂದ್ರೆಯವರಷ್ಟು ಕಷ್ಟಪಟ್ಟವರು ಬೇರೆ ಯಾವ ಸಾಹಿತಿಯೂ ಇರಲಿಕ್ಕಿಲ್ಲ. ಆದರೆ ನೋವನ್ನೆಲ್ಲ ನುಂಗಿ ಒಳಿತಾದದ್ದನ್ನೇ ಜನರಿಗೆ ತಮ್ಮ ಸಾಹಿತ್ಯದ ಮೂಲಕ ನೀಡಿದರು ಎಂದರು.
ದೊಡ್ಡಬಳ್ಳಾಪುರದ ವಾಣಿಜ್ಯ ತೆರಿಗೆ ಅಧಿಕಾರಿ ಸ್ಮಿತಾ, ಸರ್ಕಾರಿ ಶಾಲಾ ಕನ್ನಡ ಶಿಕ್ಷಕಿ ಯಶೋಧಾ, ಉಪನ್ಯಾಸಕಿ ಪ್ರಭಾ ಅವರು ಕಾವ್ಯವಾಚನ ಮಾಡಿದರು. ವೈದ್ಯೆ ಡಾ. ಇಂದಿರಾ ಅವರು ಸ್ವಾಗತ ಕೋರಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಡಿ.ಎಂ.ಘನಶ್ಯಾಂ, ದಕ್ಷಿಣ ಜಿಲ್ಲಾ ಅಧ್ಯಕ್ಷ ಡಾ. ಭಾನು, ಉತ್ತರ ಜಿಲ್ಲಾ ಅಧ್ಯಕ್ಷ ಸದ್ಯೋಜಾತ ಭಟ್ ಮತ್ತಿತರರು ಉಪಸ್ಥಿತರಿದ್ದರು.