Na-Kandanthe-Lakshmana
ಯಲ್ಲಾಪುರ ತಾಲೂಕಿನ ಶ್ರೀ ಮಾತಾ ವೈದಿಕ ಶಿಕ್ಷಣ ಸಂಸ್ಥೆ ಕೋಟೆಮನೆ ಉಮ್ಮಚಗಿ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿ ಇವುಗಳ ಸಹಯೋಗದೊಂದಿಗೆ ದಿನಾಂಕ 26-11-2023 ರವಿವಾರದಂದು ನಾ ಕಂಡಂತೆ ಲಕ್ಷ್ಮಣ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ಮಕ್ಕಳ ಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ)
ಮಕ್ಕಳ ಪ್ರಕಾರ

ಯಲ್ಲಾಪುರ ತಾಲೂಕಿನ ಶ್ರೀ ಮಾತಾ ವೈದಿಕ ಶಿಕ್ಷಣ ಸಂಸ್ಥೆ
ಕೋಟೆಮನೆ ಉಮ್ಮಚಗಿ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿ ಇವುಗಳ ಸಹಯೋಗದೊಂದಿಗೆ ದಿನಾಂಕ 26-11-2023 ರವಿವಾರದಂದು ನಾ ಕಂಡಂತೆ ಲಕ್ಷ್ಮಣ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ಮಕ್ಕಳ ಗೋಷ್ಠಿಯನ್ನು ಆಯೋಜಿಸಲಾಗಿತ್ತು.

ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಎಂ ಜಿ ಭಟ್ ಸಂಕದಗುಂಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಮೂಲ ವಾಲ್ಮೀಕಿ ರಾಮಾಯಣಕ್ಕೂ ತದನಂತರದಲ್ಲಿ ಬಂದ ರಾಮಾಯಣದ ಕಥೆಗೂ ಭಿನ್ನತೆಯನ್ನು ಕಾಣುತ್ತೇವೆ. ರಾಮಾಯಣದಲ್ಲಿ ಲಕ್ಷ್ಮಣನ ವ್ಯಕ್ತಿತ್ವವು ಅಗಾಧವಾಗಿದ್ದು ಅದನ್ನು ಉಳಿದ ಬರೆಹಗಾರರು ಅಷ್ಟಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ . ನಾವು ಚಿಕ್ಕವರಿದ್ದಾಗ ಹಿರಿಯರು ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು. ಇಂದಿನ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳು ರಾಮಾಯಣ ಮಹಾಭಾರತವನ್ನು ಓದುವಂತಾಗುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅ.ಭಾ.ಸಾ.ಪ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ ಭಟ್ ನರೂರು ಇವರು ಮಾತನಾಡಿ “ಸ್ವಾತಂತ್ರ್ಯ ಬಂದ ನಂತರವೂ ನಮ್ಮ ಸಂಸ್ಕೃತಿ ಪರಂಪರೆಯ ಮೇಲೆ ಆಕ್ರಮಣ ನಡೆಯುತ್ತಿದೆ. ಅ.ಭಾ.ಸಾ.ಪ ಕಾರ್ಯ ಚಟುವಟಿಕೆ ಪ್ರಾರಂಭವಾದ ಮೇಲೆ ಇಂತಹ ಆಕ್ರಮಗಳು ಕಡಿಮೆಗೊಂಡಿವೆ ಭವಿಷ್ಯದಲ್ಲಿ ಯುವ ಜನಾಂಗಕ್ಕೆ ಸನ್ಮಾರ್ಗದಲ್ಲಿ ನಡೆಯುವಂತಹ ಮೌಲ್ಯಯುತವಾದ ನಡೆಯನ್ನು ಹಾಕಿ ಕೊಡುವುದೇ ಅ.ಭಾ.ಸಾ.ಪ.ದ ಮುಖ್ಯ ಉದ್ದೇಶ” ಎಂದು ತಿಳಿಸಿದರು.

“ವೇದಗಳು ಪುರಾಣಗಳು ನಮ್ಮ ಸಂಸ್ಕೃತಿಗೆ ಬಲವನ್ನು ತಂದುಕೊಟ್ಟಿದೆ. ಅನೇಕ ದೇಶಗಳು ನಮ್ಮ ಸಂಸ್ಕೃತಿಯನ್ನೇ ಗೌರವಿಸಿ ಅನುಸರಿಸುತ್ತಿದ್ದಾರೆ. ಮಕ್ಕಳಲ್ಲಿ ರಾಷ್ಟ್ರೀಯತೆಯ ಅರಿವನ್ನು ಮೂಡಿಸುವ ಸಲುವಾಗಿ ಅ.ಭಾ.ಸಾ.ಪ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಕ್ಕಳಿಂದ ಸಮಷ್ಟಿಗೆ ತೊಡಕಾಗದ ರೀತಿಯಲ್ಲಿ ಸಾಹಿತ್ಯಗಳು ಮೂಡಬೇಕು ಎನ್ನುವ ಉದ್ದೇಶದಿಂದ ರಾಮಾಯಣದಲ್ಲಿನ ಲಕ್ಷ್ಮಣನ ಪಾತ್ರ ಆಪ್ತವಾಗಿದ್ದು ನಾ ಕಂಡಂತೆ ಲಕ್ಷ್ಮಣ ವಿಷಯವನ್ನು ಮಕ್ಕಳು ಅಭ್ಯಸಿಸುವ ಸಲುವಾಗಿ ಈ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ” ಎಂದು ಅಭಾಸಾಪ ಮಕ್ಕಳ ಪ್ರಕಾರದ ಮುಖ್ಯಸ್ಥರಾದ ಸುಜಾತಾ ಹೆಗಡೆ ಕಾಗಾರಕೊಡ್ಲು ಆಶಯ ನುಡಿಗಳನ್ನಾಡಿದರು.

ಶೀರ್ಷಿಕೆ ಗೀತೆಯೊಂದಿಗೆ ಮೊದಲ ಗೋಷ್ಠಿ ಪ್ರಾರಂಭವಾಯಿತು.

ರಾಜ್ಯದೆಲ್ಲೆಡೆಯಿಂದ ಬಂದ ಒಟ್ಟು 17 ಮಕ್ಕಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ ಮೂರು ಅವಧಿಯಲ್ಲಿ ಗೋಷ್ಠಿಗಳು ನಡೆದವು.

ಗೋಷ್ಠಿಯ ಕೊನೆಯಲ್ಲಿ ವಿದ್ವಾಂಸರಾದ ಡಿ. ಶಂಕರ್ ಭಟ್ ಯಲ್ಲಾಪುರ ಇವರು ಸವಿವರವಾಗಿ ಲಕ್ಷ್ಮಣನ ಕಥೆಯನ್ನು ಹೇಳಿದರು.

ಸಮಾರೋಪ ಅವಧಿಯಲ್ಲಿ ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷರಾದ ಟಿ. ವಿ. ಹೆಗಡೆಯವರು “ಇಂದಿನ ಮಕ್ಕಳು ರಾಮಾಯಣ ಮಹಾಭಾರತವನ್ನು ಅಭ್ಯಸಿಸುವುದು ಅವಶ್ಯ. ರಾಮಾಯಣದ ಲಕ್ಷ್ಮಣನ ವ್ಯಕ್ತಿತ್ವ ನಮಗೆ ಆದರ್ಶಪ್ರಾಯ” ಎಂದು ನುಡಿದರು. ವಿಜಯವಾಣಿ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದ, ಪ್ರಸ್ತುತ ವಿಶ್ವದರ್ಶನ ಮಾಧ್ಯಮ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಇಳೆಗುಂಡಿಯವರು ಮಾತನಾಡಿ “ಭಾರತ ರಾಷ್ಟ್ರವಾಗಿ ಉಳಿಯುವಲ್ಲಿ ನೈತಿಕ ಅಡಿಪಾಯವೇ ಕಾರಣ. ಇದರ ಜೊತೆ ನಮ್ಮ ಸಮರ್ಥ ಸೇನೆ ಬಾಹ್ಯ ಆಕ್ರಮಣಗಳಿಂದ ನಮ್ಮನ್ನು ರಕ್ಷಿಸಿದೆ. ಅವರ ತ್ಯಾಗ ಶೌರ್ಯಗಳನ್ನೂ ಮನದಲ್ಲಿಟ್ಟು ನಾವು ಬದುಕಬೇಕು. ಈ ಕಾರ್ಯಕ್ರಮದ ಪರಿಕಲ್ಪನೆ ರಾಮಾಯಣವನ್ನೂ ರಾಮಲಕ್ಷ್ಮಣರನ್ನೂ ಜೊತೆಗೆ ನಮ್ಮನ್ನೂ ಮರುಶೋಧನೆಗೆ ತೊಡಗಿಸುವಂತಹುದು. ಮಕ್ಕಳನ್ನೂ ಪಾಲಕರನ್ನೂ ಚಿಂತನೆಗೆ ಹಚ್ಚುವಂತಹುದು. ರಾಮಾಯಣದಲ್ಲಿ ಪ್ರತಿಮೆಗಳೂ ಸಂಕೇತಗಳೂ ಢಾಳಾಗಿವೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಸಹೋದರತ್ವದ ಬೆಳಕು ಲಕ್ಷ್ಮಣನ ಜೀವನದ ಸಂದೇಶ. ಅ. ಭಾ. ಸಾ.ಪ. ಇದನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಕ್ಕೂ ವಿಸ್ತರಿಸಿ ಈ ಕಾವ್ಯಗಳ ಮರು ಓದಿಗೆ ಪ್ರೇರಣೆ ನೀಡಲಿ. ಮಕ್ಕಳು ಇನ್ನಷ್ಟು ವಿಶ್ಲೇಷಣಾಪೂರ್ಣವಾಗಿ ಪಾತ್ರಗಳನ್ನು ಓದುವಂತಾಗಲಿ” ಎಂದು ಹೇಳಿದರು.

ಇಂದಿನ ಶಿಕ್ಷಣ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತಿದೆ. ಬದಲಾಗಿ ಸೇವಾ ಮನೋಭಾವ ಬೆಳೆಸುವುದರಿಂದ ಉತ್ತಮ ಸಮಾಜ ನಿರ್ಮಿತಿ ಸಾಧ್ಯ. ಆದ್ದರಿಂದಲೇ ಈ ಕಾರ್ಯಕ್ರಮವನ್ನು ಸ್ಪರ್ಧೆಯಾಗಿ ಆಯೋಜಿಸಲಿಲ್ಲ.‌ ರಾಮ ಅತಿಮಾನುಷ ವ್ಯಕ್ತಿ. ಆದರೆ ಲಕ್ಷ್ಮಣ ಸಾಮಾನ್ಯ ಮನುಷ್ಯನಾಗಿ ಕಾಣುವುದರಿಂದ ನಮಗೆ ಮಾದರಿಯಾಗಿದ್ದಾನೆ.
ಸೇವೆ ಮತ್ತು ಶೌರ್ಯಗಳು ಭಿನ್ನ. ರಾಮಸೀತೆಯರ ಸೇವೆಗೆಂದು ಬಂದ ಲಕ್ಷ್ಮಣ ಶೌರ್ಯವನ್ನೂ ತೋರಿ ಅವೆರಡಲ್ಲೂ ಸಮನ್ವಯ ಸಾಧಿಸಿದ್ದಾನೆ. ಹಾಗೆಯೇ ರಾಮ ಶಾಂತ, ಲಕ್ಷ್ಮಣ ಶೀಘ್ರಕೋಪಿ. ಇವೆರಡರ ಸಮನ್ವಯವನ್ನು ಕೂಡ ರಾಮಾಯಣ ಸಾಧಿಸಿದೆ. ನಮ್ಮ ಜೀವನದಲ್ಲೂ ವಿರುದ್ಧ ಸ್ಥಿತಿಗಳ ಸಮನ್ವಯ ಸಾಧನೆಗೆ ಲಕ್ಷ್ಮಣನೇ ಮಾದರಿಯಾಗಿದ್ದಾನೆ ಎಂದು
ಮಕ್ಕಳ ಗೋಷ್ಠಿಯ ಅವಲೋಕನವನ್ನು ಮಾಡಿದ ಅ.ಭಾ.ಸಾ.ಪ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಶೇವಿರೆಯವರು ನುಡಿದರು.

ಕುಮಾರಿ ಶ್ರಾವಣಿ ಇವಳಿಂದ ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.

Leave a Reply

Your email address will not be published. Required fields are marked *