ಯಲ್ಲಾಪುರ: ಯಾರೊಬ್ಬರಿಗೂ ಅರ್ಥವಾಗದ ಶ್ರೀ ಕೃಷ್ಣ ಪರಮಾತ್ಮ ಅಪೂರ್ವ ವೇಷಧಾರಿ ಎಂದು ನಾವು ಭಾವಿಸುತ್ತೇವೆ. ಭಗವಂತನಾದ ಅವನ ನಡೆ ನಮ್ಮೆಲ್ಲರಿಗೂ ಆದರ್ಶವಾಗಿದ್ದು, ನಮಗೆ ಅದು ಸದಾ ಅನುಕರಣೀಯವೂ ಹೌದು ಎಂದು ಉಮ್ಮಚ್ಚಿಗಿಯ ಶ್ರೀಮಾತಾ ಸಂಸ್ಕೃತ ಮಹಾ ಪಾಠಶಾಲೆಯ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಭಟ್ಟ ಇಡುಗುಂದಿ ಹೇಳಿದರು.
ಅಕ್ಟೋಬರ್ 20ರಂದು ತಾಲೂಕಿನ ಉಮ್ಮಚ್ಚಿಗಿ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಕ್ಕಳ ಪ್ರಕಾರ, ಶ್ರೀಮಾತಾ ವೈದಿಕ ಶಿಕ್ಷಣ ಸಂಸ್ಥೆ ಕೋಟೆಮನೆ (ಉಮ್ಮಚಗಿ), ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರ ಸಂಘ ಇವರ ಸಹಯೋಗದೊಂದಿಗೆ “ಮರಳಿ ಮಡಿಲಿಗೆ” (ಮುದ್ದು ಕೃಷ್ಣನ ಉದ್ದ ಹೆಜ್ಜೆ) ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ಮಕ್ಕಳ ಗೋಷ್ಠಿಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಕೃಷ್ಣನ ನಡೆನುಡಿಗಳು ನಮ್ಮ ಸಂಸ್ಕೃತಿಯ ಕುರುಹಾಗಿದೆ. ವಾಲ್ಮೀಕಿಯ ಕಣ್ಣಿಂದ ಶ್ರೀರಾಮನನ್ನು; ವ್ಯಾಸರ ಕಣ್ಣಿಂದ ಮಹಾಭಾರತವನ್ನು ನಾವು ನೋಡಬೇಕಾಗಿದ್ದು, ನಂತರದ ಉಳಿದ ರಚನೆಗಳಿಗೆ ಇದೇ ಗ್ರಂಥಗಳು ಪ್ರಮಾಣವಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಆಚಾರ ವಿಚಾರಗಳಲ್ಲಿ ಶ್ರೀ ಕೃಷ್ಣ ತೋರಿದ ಮಾರ್ಗದರ್ಶನವನ್ನು ನಾವು ಅನುಕರಿಸಬೇಕಾಗಿದೆ. ಅಪೂರ್ವ ತಂತ್ರಗಾರಿಕೆಯನ್ನು ಹೊಂದಿದ್ದ ಶ್ರೀಕೃಷ್ಣ ಇಂದಿಗೂ ಹೇಗೆ ಪ್ರಸ್ತುತ ಎಂಬುದಕ್ಕೆ ಇಂದಿನ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದ ಅವರು, ಶ್ರೀರಾಮ ನಮ್ಮ ಬದುಕಿಗೆ; ಶ್ರೀ ಕೃಷ್ಣ ನಮ್ಮ ಬುದ್ಧಿಗೆ ಸೇರಿದರೆ ನಮ್ಮೆಲ್ಲರ ಜೀವನ ಧನ್ಯವಾಗುತ್ತದೆ. ಆದ್ದರಿಂದ ಸದ್ಗ್ರಂಥಗಳ ಓದನ್ನು ನಾವು ವಿಮರ್ಶಾತ್ಮಕ ರೀತಿಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಇಂದಿನ ದಾವಂತದ ಯುಗದಲ್ಲಿಯೂ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಭವಿಷ್ಯದ ಆಶಾಕಿರಣಗಳಾಗಿ ಗೋಚರಿಸುತ್ತಿದ್ದಾರೆ ಎಂದರು. ಅಭ್ಯಾಗತರಾಗಿದ್ದ ಅಭಾಸಾಪ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಜಗದೀಶ್ ಭಂಡಾರಿಯವರು ಮಾತನಾಡಿ, ಪ್ರತಿಭಾನ್ವಿತ ಮಕ್ಕಳ ಭಾವಪೂರ್ಣ ಕಾರ್ಯಕ್ರಮ ಸಂಘಟಿಸಿದ ಸ್ಥಳೀಯ ಅಭಾಸಾಪಕ್ಕೆ ಧನ್ಯವಾದ ಹೇಳಲೇ ಬೇಕಿದೆ ಎಂದರು.
19 ಜಿಲ್ಲೆಗಳಿಂದ ಆಗಮಿಸಿದ 25 ಮಕ್ಕಳು ತಮ್ಮ ವಿಭಿನ್ನ ಪ್ರತಿಭೆಯನ್ನು ವೇದಿಕೆಯಲ್ಲಿ ಸಾದರಪಡಿಸಿದರು. ಆಧ್ಯಾ ರಾಘವೇಂದ್ರ ಶಿರಸಿ, ನಿರೀಕ್ಷಾ ರಾವ್ ಹುಬ್ಬಳ್ಳಿ, ಕೇಶವ ದಡ್ಡೆ ಬೀದರ್, ಹಂಸಿನಿ ನಟೇಶ ಮೈಸೂರು, ವಿದ್ಯಾಶ್ರೀ ಜಿ.ಎಂ ಕೋಲಾರ, ಶ್ರೀಯಾ ಪ್ರಕಾಶ ಭಟ್ಟ ಯಲ್ಲಾಪುರ, ಮನಸ್ವಿ ಅಲೆವೂರು ಉಡುಪಿ, ಗಣೇಶ ಚಿಂತಾಮಣಿ ಚಿಕ್ಕಬಳ್ಳಾಪುರ, ಧನ್ವಿತಾ ಕಾರಂತ ದಕ್ಷಿಣ ಕನ್ನಡ, ವಿಜಯ ಕರೆನ್ನವರ ಬಾಗಲಕೋಟೆ, ಪ್ರೇರಣ ಭಾನುರಾಜ ಬನವಾಸಿ, ಮನಸ್ವಿ ಶಾಸ್ತ್ರಿ ಬೆಂಗಳೂರು, ಶ್ರಾವಣಿ ಸಂಗಮೇಶ ಜೋಗೂರ ಯಾದಗಿರಿ, ಶ್ರಾವ್ಯ ಎಂ ಹೆಗಡೆ ಕಾರವಾರ, ಶಮಾ ಪಟಗಾರ ಕೊಪ್ಪಳ, ಮೋಕ್ಷ ಲಾವಣ್ಯ ಮೈಸೂರು, ವರ್ಷ ರೆಡ್ಡಿ ಬಳ್ಳಾರಿ, ವೇದಶ್ರೀ ಮುನಿರಾಜು ಚಿಕ್ಕಬಳ್ಳಾಪುರ, ಆರ್ಯ ಭಟ್ಟ ತುಮಕೂರು, ದಿಗಂತ್ ಕೆ.ವಿ ಸಿದ್ದಾಪುರ, ಎಚ್ಆರ್ ಪ್ರತೀಕ ಕಾರಂತ ಉಡುಪಿ, ಸಮರ್ಥ ಸಾಂಗ್ಲಿ ಗೋಕಾಕ, ಪ್ರಜ್ಞಾ ವಡುಮಾವ ಶಿರಸಿ, ಅಗ್ರೇಸರ ಶೃಂಗೇರಿ ತಮ್ಮ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಪಾಲಕರ ಪರವಾಗಿ ರಾಮಕೃಷ್ಣ ಭಟ್ಟ, ಶ್ರೀಕಲ ಕಾರಂತ, ಪತಂಜಲಿ ವೀಣಾಕರ್, ಓಂ ಪ್ರಕಾಶ್ ದಡ್ಡೆ ಅನಿಸಿಕೆ ವ್ಯಕ್ತಪಡಿಸಿದರು. ಅಭಾಸಾಪ ಪ್ರಾಂತ ಮಕ್ಕಳ ಪ್ರಕಾರದ ಪ್ರಮುಖ್ ಶ್ರೀಮತಿ ಸುಜಾತಾ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು, ಶ್ರೀಮತಿ ಚಂದ್ರಕಲಾ ಭಟ್ಟ ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಪುಷ್ಪ ಭಟ್ಟ ವಂದಿಸಿದರು.