ಕರ್ನಾಟಕ

         ನಮ್ಮ ರಾಜ್ಯದಲ್ಲಿ ‘ಅಭಾಸಾಪ’ ಕಾರ್ಯವು ವಿಸ್ತಾರವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದು 2014ರಿಂದ. ಶ್ರೀ ಚಂದ್ರಶೇಖರ ಭಂಡಾರಿಯವರು ಇಲ್ಲಿ ‘ಅಭಾಸಾಪ’ದ ಬೀಜಾರೋಪವನ್ನು ಮಾಡಿದರು. ಆ ವರ್ಷದ ವ್ಯಾಸ ಜಯಂತಿಯಂದು ಬೆಂಗಳೂರಿನಲ್ಲಿ ಡಾ. ಬಾಬು ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪ್ರಚಾರಕರಾದ ಶ್ರೀ ನ. ಕೃಷ್ಣಪ್ಪ ಅವರಿಂದ ಮೊದಲ ಘಟಕದ ಉದ್ಘಾಟನೆ ನೆರವೇರಿತು. 2020ರ ಹೊತ್ತಿಗೆ ರಾಜ್ಯದಲ್ಲಿ ಐವತ್ತು ಘಟಕಗಳು ಇದ್ದುವು. ಅವು ಮೊದಲ ಲಾಕ್ಡೌನ್ ಸಂದರ್ಭದಲ್ಲಿ ವ್ಯಾಪಕವಾಗಿ ನಡೆದ ಆನ್ಲೈನ್ ಘಟಕ ಉದ್ಘಾಟನಾ ಕಾರ್ಯಕ್ರಮಗಳ ಮೂಲಕ ನೂರೈವತ್ತಕ್ಕೇರಿದವು. ಇದೀಗ ರಾಜ್ಯದ 31 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳಿವೆ. ಐವತ್ತಕ್ಕೂ ಅಧಿಕ ತಾಲೂಕುಗಳಲ್ಲಿ ತಾಲೂಕು ಸಮಿತಿಗಳಿವೆ. 

        2016ರ ಮೇ ತಿಂಗಳಿನಲ್ಲಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಶಿರಸಿ ಸಮೀಪದ ಯಡಳ್ಳಿಯಲ್ಲಿ ‘ಸಾಹಿತ್ಯದಲ್ಲಿ ಕೌಟುಂಬಿಕ ಮೌಲ್ಯಗಳು’ ಎಂಬ ವಿಷಯದ ಮೇಲೆ ಮೊದಲ ಅಧಿವೇಶನ ನಡೆಯಿತು. ರಾಜ್ಯದೆಲ್ಲೆಡೆಯ ಸುಮಾರು ಒಂದು ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸಿದ್ದ ಈ ಅಧಿವೇಶನವು ವಿಷಯಕ್ಕೆ ತಕ್ಕಂತೆ ಯಡಳ್ಳಿ ಗ್ರಾಮಸ್ಥರ ಆತ್ಮೀಯತೆಯನ್ನು ಅನುಭವಿಸುತ್ತ ಒಂದು ಕೌಟುಂಬಿಕ ವಾತಾವರಣದಲ್ಲಿ ನಡೆಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ರಾಜ್ಯ ಅಧಿವೇಶನದ ಮುಂದಿನ ಪಾಳಿಯ ಹೊಣೆಗಾರಿಕೆಯನ್ನು ಮೈಸೂರಿನ ಕಾರ್ಯಕರ್ತರು ವಹಿಸಿಕೊಂಡರು. ಮುಂದೆ, 2018ರ ಡಿಸೆಂಬರ್ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಹಾಲಿನಲ್ಲಿ ನಡೆದ ಈ ಎರಡನೆಯ ರಾಜ್ಯ ಅದಿವೇಶನದ ವಿಷಯ ‘ಸಾಹಿತ್ಯದಲ್ಲಿ ಭಾರತೀಯತೆ’. ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಬಂದಿದ್ದ ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದವರು ಪ್ರೊ. ಪ್ರೇಮಶೇಖರ್ ಅವರು. ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನು ಎಳೆಎಳೆಯಾಗಿ ತೆರೆದಿಟ್ಟು ಸಮಾರೋಪ ಭಾಷಣ ಮಾಡಿದ ಡಾ. ಎಸ್. ಎಲ್. ಭೈರಪ್ಪನವರು ಸಾಹಿತ್ಯದಲ್ಲಿ ಭಾರತೀಯತೆಗಿರುವ ಸವಾಲುಗಳ ಕುರಿತ ಜಾಗೃತಿಯ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡಿದರು. 2022ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಸಾಹಿತಿ ಡಾ. ನಾ. ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ‘ಸ್ವರಾಜ್ಯ – ೭೫’ ಎಂಬ ವಿಷಯದ ಕುರಿತು ಮೂರನೆಯ ರಾಜ್ಯ ಅಧಿವೇಶನವು ಕೋವಿಡ್ ಸಂಕಟದ ವಾತಾವರದಲ್ಲಿಯೂ ಸಾವಿರಕ್ಕೂ ಅಧಿಕ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. 

         ಶಿವಮೊಗ್ಗದ ಹಾದಿಗಲ್ಲು ಎಂಬ ಗ್ರಾಮದಲ್ಲಿ  ‘ಅಭಾಸಾಪ’ದ ರಾಜ್ಯ ಸಮಿತಿಯು ಆಯೋಜಿಸಿದ ಒಂದು ದಿನದ “ಬಹುಭಾಷಾ ಕವಿಗೋಷ್ಠಿ”ಯು ಸಮಯಪಾಲನೆ, ಅಚ್ಚುಕಟ್ಟುತನ, ವಿಷಯನಿಷ್ಠ ಮಾತು, ಕೌಟುಂಬಿಕ ವಾತಾವರಣ ಇತ್ಯಾದಿ ಹಲವು ಕಾರಣಗಳಿಗಾಗಿ ಉಲ್ಲೇಖನೀಯ. ಇನ್ನೂರೈವತ್ತಕ್ಕೂ ಅಧಿಕ ಮಂದಿ ಕಾವ್ಯಾಸಕ್ತರು ಅವಧಿಪೂರ್ಣ ಭಾಗವಹಿಸಿದ್ದ ಈ ಕವಿಗೋಷ್ಠಿಯಲ್ಲಿ 12 ಸ್ಥಳೀಯ ಭಾಷೆ ಹಾಗೂ 13 ರಾಜ್ಯಸ್ತರದ ಭಾಷೆ, ಹೀಗೆ ಒಟ್ಟು 25 ಭಾಷೆಗಳ 49 ಕವಿಗಳು ಕವನಗಳನ್ನು ವಾಚಿಸಿದರು. ಹಾಗೆಯೇ; ವ್ಯಾಕರಣಲೋಕದ ಮೇರುವಿದ್ವಾಂಸರಾಗಿದ್ದ ವಿದ್ವಾನ್ ರಂಗನಾಥ ಶರ್ಮಾ ಅವರ ಜನ್ಮಶತಿ ನಿಮಿತ್ತ ವರ್ಷಪೂರ್ತಿ ರಾಜ್ಯದೆಲ್ಲೆಡೆ ಅವರ ಸಾಹಿತ್ಯದ ಮೇಲೆ ನಡೆದ ವಿವಿಧ ಗೋಷ್ಠಿಗಳ ಉದ್ಘಾಟನಾ ಕಾರ್ಯಕ್ರಮ ನಡೆದುದು ಅವರ ಹುಟ್ಟೂರು ಸೊರಬ ಸಮೀಪದ ನಡಹಳ್ಳಿಯಲ್ಲಿ. ಯಾವುದೇ ಭೇದವಿಲ್ಲದೆ ಎಲ್ಲ ಸಮುದಾಯದ ಮಂದಿ ಒಂದಾಗಿ ಸಹಕರಿಸಿ ನಡೆಸಿದ ಒಂದು ದಿನದ ಈ ಕಾರ್ಯಕ್ರಮವೂ ‘ಅಭಾಸಾಪ’ದ ಕಾರ್ಯದ ವಿಕಾಸದ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ಒಂದು ಮೈಲಿಗಲ್ಲಾಗಿ ಪರಿಣಮಿಸಿತು. ಸ್ವರಾಜ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಅಭಾಸಾಪ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಭೇಟಿನೀಡಿ ಆ ಮನೆಯ ಹಿರಿಯರನ್ನು ಸಮ್ಮಾನಿಸಿ ಸ್ವಾತಂತ್ರ್ಯಕ್ಕಾಗಿ ಅವರ ಕುಟುಂಬವು ನೀಡಿದ ಕೊಡುಗೆಯನ್ನು ಸ್ಮರಿಸಿದ ಸನ್ನಿವೇಶವು ಇನ್ನೊಂದು ಮಹತ್ತ್ವದ ಮೈಲಿಗಲ್ಲು. ಇದೇ ರೀತಿಯಲ್ಲಿ ಹತ್ತುಹಲವು ವೈವಿಧ್ಯಪೂರ್ಣ ಪರಿಣಾಮಕಾರೀ ಕಾರ್ಯಕ್ರಮಗಳ ಆಯೋಜನೆಗಳ ಮೂಲಕ ಕರ್ನಾಟಕದ ‘ಅಭಾಸಾಪ’ ಕಾರ್ಯವು ಎಲ್ಲರ ಗಮನವನ್ನು ಸೆಳೆದಿದೆ.