ಜನವರಿ ೭, ೨೦೨೪ ಭಾನುವಾರ ಸಂಜೆ ಬೆಂಗಳೂರಿನ ಮಹಿಳಾ ಪ್ರಕಾರದ “ರಾಮಾಯಣಾವತಾರ” ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಒಂಭತ್ತು ಮಂದಿ ಸದಸ್ಯರು ರಾಮಾಯಣದ ಬೇರೆಬೇರೆ ರೂಪಗಳ ಆಯ್ದ ವಿವರಗಳನ್ನು ನೀಡಿದರು. ಮೂಲದ(ಶಾಂತ ನಾಗಮಂಗಲ) ಜತೆಜತೆಗೇ ಮದ್ವಾಚಾರ್ಯರು ಕೊಟ್ಟ ಮಧ್ವರಾಮಾಯಣˌ(ಮೇಧಾ ಪ್ರಹ್ಲಾದಾಚಾರ್) ತ ಸು ಶಾಮರಾಯರು ಸರಳೀಕರಿಸಿ ನೀಡಿದ ವಚನ ರಾಮಾಯಣˌ(ಶೀಲಾ ಅರಕಲಗೂಡು) ತುಲಸೀದಾಸರ ರಾಮಚರಿತಮಾನಸˌ(ಮಾಧುರಿ ದೇಶಪಾಂಡೆ) ನಾಗಚಂದ್ರನ ಪಂಪರಾಮಾಯಣˌ(ರಾಜೇಶ್ವರಿ ಮೂರ್ತಿ) ನರಹರಿಯ ತೊರವೆ ರಾಮಾಯಣˌ(ವೀಣಾ ರವಿಕುಮಾರ್) ಥೈಲಾಂಡಿನ ರಾಂಕಿನ್ (ಮೃಣಾಲಿನಿ ಬಾಗೇವಾಡಿ)ಗಳ ವಿಶೇಷ ವಿವರಗಳನ್ನು ಮಾತ್ರವಲ್ಲದೆ ರಾಮಾಯಣ ಪ್ರತಿಪಾದಿಸುವ ಮೌಲ್ಯಗಳನ್ನೂ ˌ(ಮೃದುಲಾ) ಪ್ರಸ್ತುತದ ರಾಮಮಂದಿರಕ್ಕಾಗಿನ ಕಳೆದ ಐದಾರು ಶತಮಾನದ ಹೋರಾಟದ ಪಕ್ಷಿನೋಟವನ್ನೂ(ದಿವ್ಯಾ ಹೆಗ್ಗಡೆ) ಸಹ ಪರಿಚಯಿಸಿದರು. ಒಟ್ಟಾರೆ ಎರಡೂ ಮುಕ್ಕಾಲು ಗಂಟೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ಮಹಾಕಾವ್ಯದ ಔನ್ನತ್ಯ ˌ ವಿಶೇಷತೆˌ ವೈಶಾಲ್ಯ ˌ ಮಹತ್ವ ˌ ಅನನ್ಯತೆ ಹಾಗೂ ಪ್ರಸ್ತುತತೆಗಳೆಲ್ಲದರ ಚೇತೋಹಾರಿ ಚರ್ಚೆ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ರಾಮದೇವರ, ಭಾರತ ಮಾತೆಯ ಪಟಗಳ ಮುಂದೆ ದೀಪ ಪ್ರಜ್ವಲನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಅಬಲಾಶ್ರಮದ ಮಕ್ಕಳು ರಾಮನ ಪ್ರಾರ್ಥನೆಯನ್ನು ಮಾಡಿದರು. ಎಲ್ಲರಿಗೂ ಸ್ವಾಗತ ಭಾಷಣವನ್ನು ಮಹಿಳಾ ಪ್ರಕಾರದ ಉಪಾಧ್ಯಕ್ಷರಾದ ಶ್ರೀಮತಿ ಮೃದುಲಾರವರು ಕೋರಿದರು. ನಂತರ ಅಬಲಾಶ್ರಮ ನಡೆದು ಬಂದ ಹಾದಿ ಅದರ ಕಾರ್ಯಗಳನ್ನು ಸಭಿಕರಿಗೆ ತಿಳಿಸಿದರು ಅಲ್ಲಿಯ ಪ್ರಮುಖರಾದ ಶೇಷುರವರು ತಿಳಿಸಿದರು
ಮೊದಲಿಗೆ ವಾಲ್ಮೀಕಿ ರಾಮಾಯಣದ ಬಗೆಗೆ ಮಾತನಾಡಿದ ಅಭಾಸಾಪ ಮಹಿಳಾ ಪ್ರಕಾರದ ಅಧ್ಯಕ್ಷರಾದ ಶ್ರೀಮತಿ ಶಾಂತಾ ನಾಗಮಂಗಲವರು ರಾಮಾಯಣವನ್ನು ಕೇವಲ 5 ಹತ್ತು ನಿಮಿಷಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂಬುದನ್ನು ಹೇಳುತ್ತ ಅದರ ಪ್ರಾಚೀನತೆ ಮತ್ತು ಇತಿಹಾಸವನ್ನು ಹೇಗೆ ಭಾರತೀಯರು ಕಾವ್ಯ ರೂಪದಲ್ಲಿ ದಾಖಲಿಸಿ ಇಟ್ಟಿದ್ದಾರೆ. ಹೇಗೆ ಬ್ರಹ್ಮನಿಂದ ನಾರದ ಮುನಿಗಳಿಂದ ವಾಲ್ಮೀಕಿ ಋಷಿಗಳು ಅನುಗ್ರಹ ಪಡೆದು ಬರೆದರು ಎಲ್ಲವನ್ನೂ ಹೇಳಿದರು. ನಂತರ ಮಧ್ವ ರಾಮಾಯಣದ ಬಗೆಗೆ ಮಾತನಾಡಿದ ಶ್ರೀಮತಿ ಮೇಧಾ ಪ್ರಹ್ಲಾದಾಚಾರ್ ಜೋಶಿ ಇವರು ಶ್ರೀಮನ್ ಮಧ್ವಾಚಾರ್ಯರು ರಾಮಾಯಣದ ಇತ್ತೀಚಿಗೆ ಕೇಳಿ ಬರುವ ವಿವಾದದ ವಿಷಯಗಳಾದ ವಾಲಿಯ ವಧೆ, ಶಂಭೂಕವಧೆ, ಸೀತಾ ಪರಿತ್ಯಾಗದ ವಿಚಾರದ ಬಗೆಗೆ ಆಚಾರ್ಯರ ನಿರ್ಣಯದ ಬಗೆಗೆ ಘಟನೆಯ ಪೂರ್ವಪರ ತಿಳಿದು ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬುದನ್ನು ತಿಳಿಸಿದರು. ಶ್ರೀಮತಿ ಶೀಲಾ ಅರಕಲಗೂಡುರವರು ವಚನರಾಮಾಯಣದ ಬಗಗೆ ತಿಳಿಸುತ್ತಾ ಸರಳ ಸುಂದರವಾಗಿ ತ ಸು ಶಾಮರಾಯರು ಹೇಗೆ ಒಂದು ತಿಂಗಳಿನಲ್ಲಿಯೇ ವಚನ ರಾಮಾಯಣವನ್ನು ರಚಿಸಿದರು ಮತ್ತು ಇತ್ತೀಚಿಗೆ ವಚನ ರಾಮಾಯಣದ ಪರಿಚಯ ಯಾರಿಗೂ ಇಲ್ಲದೇ ಇರುವ ಬಗೆಗೆ ವಿಷಾದ ವ್ಯಕ್ತ ಪಡಿಸಿ ದೊರೆತಾಗ ಅದನ್ನು ಖರೀದಿಸಿ ಓದುವಂತೆ ಹೇಳಿದರು. ಶ್ರೀಮತಿ ಮಾಧುರಿ ದೇಶಪಾಂಡೆಯವರು ರಾಮಚರಿತ ಮಾನಸದ ಬಗೆಗೆ ಮಾತನಾಡಿ ಭಾರತೀಯ ಸಾಹಿತ್ಯದ ಇತಿಹಸದಲ್ಲಿ ರಾಮಚರಿತ ಮಾನಸದ ಕುರಿತಾಗಿ ಬಂದಿರುವ ಅನುವಾದ ವಿಮರ್ಶೆಗಳುಷ್ಟು ಬೇರಾವ ಗ್ರಂಥಕ್ಕೆ ಬಂದಿಲ್ಲ ಎಂದು ಹೇಳುತ್ತಾ ತುಳಸಿ ರಾಮಾಯಣದ ಪಾರಾಯಣವನ್ನು ಉತ್ತರಭಾರತೀಯರು ಮಾಡುವುದನ್ನು ಹೇಳಿ ಪ್ರಾಣ ಜಾಯ್‌ಪರ್ ವಚನನ ಜಾಯೆ ಎಂಬ ಸಂದೇಶವನ್ನು ಹೇಳುದರು. ಶ್ರೀಮತಿ ವೀಣಾ ರವಿಕುಮಾರ್‌ರವರು ಮಾತನಾಡಿ ತೊರವೆ ರಾಮಾಯಣದ ಕುರಿತು ಮಾತನಾಡಿದರು. ಕುಮಾರ ವ್ಯಾಸನ ಪ್ರೇರಣೆಯಿಂದ ಭಾಮಿನಿ ಷಟ್ಪದಿಯಲ್ಲಿ ಕುಮಾರ ವಾಲ್ಮೀಕಿ 15ನೇ ಶತಮಾನದಲ್ಲಿ ವಿಜಯಪುರದ ತೊರವೆ ಗ್ರಾಮದ ನರಸಿಂಹದೇವರ ಗುಡಿಯಲ್ಲಿ ರಚಿಸಿದ್ದು ತೊರವೆ ರಾಮಾಯಣವು ಕನ್ನಡದಲ್ಲಿ ಬಂದ ಪ್ರಥಮ ರಾಮಾಯಣದ ಕೃತಿಯಾಗಿದೆ. ಎಂದು ಹೇಳಿದರು. ನಂತರ ಆಶ್ರಮದ ವಿದ್ಯಾರ್ಥಿನಿ ಭವಾನಿ ಕುಂದಾಪುರರವರು ಕನ್ನಡದ ಏಕೈಕ ಮಹಿಳಾ ಮಹಾಕಾವ್ಯದ ರಚನೆಕಾರ್ತಿ ಬಾಲವಿಧವೆ ಶ್ರೀಮತಿ ಅಂಬಾಬಾಯಿಯವರ ಕೃತಿಯಾದ “ಶ್ರೀರಾಮ ಕಥಾಮೃತ”ದ ಬಗೆಗೆ ಮಾತನಾಡಿದರು.
ನಂತರ ಮಾತನಾಡಿದ ಶ್ರೀಮತಿ ರಾಜೇಶ್ವರಿ ಮೂರ್ತಿಯವರು ಪಂಪ ರಾಮಾಯಣದಲ್ಲಿ ಚಿತ್ರಣಗೊಂಡ ಜೈನ ಸಂಪ್ರದಾಯದಲ್ಲಿ ಹೇಗೆ ರಾಮ ಕೇವಲ ಮಾನವನಂತೆ ಚಿತ್ರಿತನಾಗಿದ್ದಾನೆ ಮತ್ತು ಪಂಪ ರಾಮಾಯಣದಲ್ಲಿ ಎತ್ತಿ ಹಿಡಿದ ಮೌಲ್ಯಗಳ ಬಗೆಗೆ ಮಾತನಾಡಿದರು. ಶ್ರೀಮತಿ ಮೃಣಾಲಿನಿ ಅಗರಖೇಡರವರು ಥೈಯ್‌ಲ್ಯಾಂಡಿನ ರಾಷ್ಟ್ರೀಯ ಮಹಾಕಾವ್ಯವಾದ “ಥಾಯ್ ರಾಮಕಿನ್” ಕಾವ್ಯದ ಬಗೆಗೆ ಹೇಳುತ್ತಾ ಹೇಗೆ ಥೈಲೆಂಡಿನಲ್ಲಿ ಬೌದ್ಧ ಹಾಗೂ ಕ್ರಿಸ್ತನ ಅನುಯಾಯಿಗಳಿದ್ದು ಹಿಂದು ಸಂಸ್ಕೃತಿಯ ರಾಮನ ಮೌಲ್ಯಗಳು ಪಾರಿವಾರಿಕ ಚೌಕಟ್ಟು ನೀತಿಗಳಿಗೆ ಮಾರುಹೋಗಿ ಅವರು ತಮ್ಮ ನಾಡಿನ ಸೊಗಡಿನೊಂದಿಗೆ ರಾಮಅಯಣವನ್ನು ರೂಪಾಂತಿಸಿಕೊಂಡಿದ್ದಾರೆ ಎಂದು ಹೇಳಿದರು. ಉಪಾಧ್ಯಕ್ಷರಾದ ಮೃದುಲಾರವರು ರಾಮಾಯಣದಲ್ಲಿ ನಮಗೆ ತಿಳಿಸಿರುವ ಮೌಲ್ಯಗಳ ಬಗೆಗೆ ಮಾತನಡುತ್ತಾ ಮಾತಾಪಿತೃಗಳ ವಾಕ್ಯಪಾಲನೆ, ಗುರು ಹಿರಿಯರಿಗೆ ಕೊಡುವ ಗೌರವ, ಮಡದಿಯನ್ನು ಪ್ರೀತಿಸುವ ಹಾಗೂ ಚಾರಿತ್ರ್ಯಕ್ಕೆ ಮಹತ್ವ ಕೊಟ್ಟ ರಾಮನ ಆದರ್ಶ ನಮಗೆ ಹೇಗೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು ಹೇಳಿದರು. ಅಭಾಸಾಪದ ಮಹಿಳಾ ಪ್ರಕಾರದ ಕಾರ್ಯದರ್ಶಿಯಾದ ಕುಮಾರಿ ದಿವ್ಯ ಹೆಗಡೆ ಕಬ್ಬಿನಗದ್ದೆಯವರು ರಾಮಮಂದಿರವು ಹೇಗೆ ಬಾಬರಿ ಮಸೀದಿಯಾಗಿ ನಿರ್ಮಾಣಗೊಂಡಿತು ಹಾಗೂ ರಾಮಮಂದಿರದ 500 ವರ್ಷಗಳ ಹೋರಾಟದಲ್ಲಿ ತಮ್ಮ ಕೊಡುಗೆ ನೀಡಿದ ಕೆಲವು ಮಹತ್ವ ವ್ಯಕ್ತಿಗಳ ಬಗೆಗೆ ಮತ್ತು ಹಿಂದುಗಳು ಹೇಡಿಗಳಲ್ಲ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ ಆದರೂ ಕೂಡ ನೀತಿಯನ್ನು ಬಿಡದೆ ಹೋರಾಡಿ ಭವ್ಯರಾಮ ಮಂದಿರದ ನಿರ್ಮಾಣವಾಗಿ ರಾಮಲಲ್ಲಾ ಮೂರ್ತಿಗಳು ಪುನಃ ಪ್ರತಿಷ್ಠಾಪನೆಗೊಳ್ಳುತ್ತಿರುವುದರ ಬಗೆಗೆ ತಿಳಿಸಿಕೊಟ್ಟರು.
4.15 ರಿಂದ 7.15ರವರೆಗೆ ನಡೆದ ಸುದೀರ್ಘಕಾರ್ಯಕ್ರಮದಲ್ಲಿ ಕೊನೆಗೆ ಅಬಲಾಶ್ರಮದ ವಿದ್ಯಾರ್ಥಿನಿ ಎಲ್ಲರಿಗೂ ಒಂದು ರಾಮನ ಪದವನ್ನು ಹೇಳಿಕೊಟ್ಟು ಭಜನೆಯನ್ನು ಮಾಡಿಸಿದವಳು ಲಘು ಉಪಹಾರ ಹಾಗೂ ಅಬಲಾಶ್ರಮದವತಿಯಿಂದ “ವಿಜಯಧ್ವನಿ” ಪುಸ್ತಕವನ್ನು ಹಂಚುವುದರ ಮೂಲಕ ಮುಕ್ತಾಯವಾಗಿತು. 70-80 ಜನರು ಪಾಲಗೊಂಡಿದ್ದರು.