ಅಧಿವೇಶನ

೨೦೧೬ರ ಮೇ ತಿಂಗಳಿನಲ್ಲಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಶಿರಸಿ ಸಮೀಪದ ಯಡಳ್ಳಿಯಲ್ಲಿ ‘ಸಾಹಿತ್ಯದಲ್ಲಿ ಕೌಟುಂಬಿಕ ಮೌಲ್ಯಗಳು’ ಎಂಬ ವಿಷಯದ ಮೇಲೆ ಮೊದಲ ಅಧಿವೇಶನ ನಡೆಯಿತು. ರಾಜ್ಯದೆಲ್ಲೆಡೆಯ ಸುಮಾರು ಒಂದು ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸಿದ್ದ ಈ ಅಧಿವೇಶನವು ವಿಷಯಕ್ಕೆ ತಕ್ಕಂತೆ ಯಡಳ್ಳಿ ಗ್ರಾಮಸ್ಥರ ಆತ್ಮೀಯತೆಯನ್ನು ಅನುಭವಿಸುತ್ತ ಒಂದು ಕೌಟುಂಬಿಕ ವಾತಾವರಣದಲ್ಲಿ ನಡೆಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ರಾಜ್ಯ ಅಧಿವೇಶನದ ಮುಂದಿನ ಪಾಳಿಯ ಹೊಣೆಗಾರಿಕೆಯನ್ನು ಮೈಸೂರಿನ ಕಾರ್ಯಕರ್ತರು ವಹಿಸಿಕೊಂಡರು. ಮುಂದೆ, ೨೦೧೮ರ ಡಿಸೆಂಬರ್ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಹಾಲಿನಲ್ಲಿ ನಡೆದ ಈ ಎರಡನೆಯ ರಾಜ್ಯ ಅದಿವೇಶನದ ವಿಷಯ ‘ಸಾಹಿತ್ಯದಲ್ಲಿ ಭಾರತೀಯತೆ’. ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಬಂದಿದ್ದ ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದವರು ಪ್ರೊ. ಪ್ರೇಮಶೇಖರ್ ಅವರು. ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನು ಎಳೆ ಎಳೆಯಾಗಿ ತೆರೆದಿಟ್ಟು ಸಮಾರೋಪ ಭಾಷಣ ಮಾಡಿದ ಡಾ. ಎಸ್. ಎಲ್. ಭೈರಪ್ಪನವರು ಸಾಹಿತ್ಯದಲ್ಲಿ ಭಾರತೀಯತೆಗಿರುವ ಸವಾಲುಗಳ ಕುರಿತ ಜಾಗೃತಿಯ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡಿದರು. ೨೦೨೨ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಸಾಹಿತಿ ಡಾ. ನಾ. ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ‘ಸ್ವರಾಜ್ಯ – ೭೫’ ಎಂಬ ವಿಷಯದ ಕುರಿತು ಮೂರನೆಯ ರಾಜ್ಯ ಅಧಿವೇಶನವು ಕೋವಿಡ್ ಸಂಕಟದ ವಾತಾವರದಲ್ಲಿಯೂ ಸಾವಿರಕ್ಕೂ ಅಧಿಕ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸಾಹಿತ್ಯದಲ್ಲಿ ʼಸ್ವʼ

ಇದೀಗ ‘ಅಭಾಸಾಪ ಕರ್ನಾಟಕ’ವು ನಾಲ್ಕನೆಯ ಅಧಿವೇಶನದ ತಯಾರಿಯಲ್ಲಿದೆ. ಈ ಅಧಿವೇಶನವು ಮುಂಬರುವ ೨೦೨೫ ಜೂನ್ ೭ ಮತ್ತು ೮ರ ಶನಿವಾರ ಹಾಗೂ ಭಾನುವಾರಗಳಂದು ದಾವಣಗೆರೆಯಲ್ಲಿ ನಡೆಯಲಿದೆ. ಈ ಬಾರಿಯ ಅಧಿವೇಶನದ ವಿಷಯ: ಸಾಹಿತ್ಯದಲ್ಲಿ ‘ಸ್ವ’.

ಯಾವುದೇ ರಾಷ್ಟ್ರ ಇಲ್ಲವೇ ಸಮಾಜ ಇಲ್ಲವೇ ವ್ಯವಸ್ಥೆ ಮೂಲಭೂತವಾಗಿ ಹೊಂದಿರಬೇಕಾದ ದ್ರವ್ಯ ‘ಸ್ವ’. ಸ್ವಂತಿಕೆ, ತನ್ನತನ, ಸ್ವ-ಗುಣ ಇತ್ಯಾದಿಗಳನ್ನು ಸೂಚಿಸತಕ್ಕ ಒಂದು ನಿರ್ದಿಷ್ಟ ಪದ ‘ಸ್ವ’.

ಮಡಿಕೆಯ ದೃಷ್ಟಾಂತದಿಂದ ಇದನ್ನು ಒಂದಷ್ಟು ಸ್ಪಷ್ಟಮಾಡಿಕೊಳ್ಳಬಹುದೆನಿಸುತ್ತದೆ:
ತೋರುನೋಟಕ್ಕೆ ಮಡಿಕೆಗೊಂದು ಆಕಾರ ಕಾಣಿಸುತ್ತದೆ. ಜತೆಗೆ ಬಣ್ಣವೂ ಕೂಡಾ. ಇದೇ ಆಕಾರದಲ್ಲಿ ಮತ್ತಿದೇ ಬಣ್ಣದಲ್ಲಿ ಪ್ಲಾಸ್ಟಿಕ್ಕಿನಿಂದಲೂ ಮಡಿಕೆಯಂಥ ವಸ್ತುವನ್ನು ತಯಾರು ಮಾಡಬಹುದು. ಲೋಹದಿಂದಲೂ ತಯಾರು ಮಾಡಬಹುದು. ಆದರೆ ಮಣ್ಣಿನ ಮಡಿಕೆ ಉಂಟುಮಾಡಬಲ್ಲ ಫಲವನ್ನಾಗಲೀ ಪರಿಣಾಮವನ್ನಾಗಲೀ ಇತರ ದ್ರವ್ಯಗಳಿಂದ ಮಾಡಿದ ಮಡಿಕೆಯಂಥ ವಸ್ತು ಉಂಟುಮಾಡಲಾರದು. ಅಂದರೆ; ಮಡಿಕೆಯ ‘ಸ್ವ’ವು ತೋರುನೋಟಕ್ಕೆ ಕಾಣುವ ಆಕಾರದಲ್ಲಾಗಲೀ ಬಣ್ಣದಲ್ಲಾಗಲೀ ಇರದೆ ಮಣ್ಣಿನಲ್ಲಿದೆ. ಮಣ್ಣು ಯಾವ ಯಾವ ಗುಣಲಕ್ಷಣಗಳನ್ನು ಹೊಂದಿರುವುದೋ ಅವು ಮಡಿಕೆಯಲ್ಲಿ ಅಂತರ್ನಿಹಿತವಾಗಿರುತ್ತವೆ. ಅವುಗಳ ಕಾರಣದಿಂದ ಮಡಿಕೆಯು ತನ್ನಲ್ಲಿರುವ ನೀರಲ್ಲಿ ತಂಪನ್ನೂ ತನ್ನಲ್ಲಿ ಬೇಯಿಸಿದ ಆಹಾರದಲ್ಲಿ ಆರೋಗ್ಯಕರವಾದುದನ್ನೂ ಕೊಡಬಲ್ಲುದು. ಇಂಥ ಸಾಮರ್ಥ್ಯ ವಿಶೇಷವನ್ನು ಮಡಿಕೆಯಲ್ಲಿ ಇಟ್ಟಿದ್ದು ಅದರ ‘ಸ್ವ’.

‘ಸ್ವ’ತ್ವವು ಎಲ್ಲ ವಸ್ತುಗಳಲ್ಲಿಯೂ ಇರುತ್ತದೆ. ಅದರಿಂದಾಗಿ ಪ್ರತಿಯೊಂದು ವಸ್ತುವೂ ವಿಶಿಷ್ಟವಾಗಿದೆ. ಈ ವಿಶಿಷ್ಟತೆಯು ಸಮಷ್ಟಿವ್ಯವಸ್ಥೆಗೆ ಪೂರಕವಾಗಿ ಅಭಿವ್ಯಕ್ತಿಯಾಗುತ್ತದೆ. ಮಾರಕವಾಗಿ ಅಭಿವ್ಯಕ್ತಗೊಂಡದ್ದನ್ನು ‘ಸ್ವ’ ಎಂದು ಪರಿಗಣಿಸಲಾಗದು. ಹೆಚ್ಚೆಂದರೆ ಅದು ‘ಸ್ವ’ತ್ವದ ವಿಕಾರರೂಪ ಎಂದುಕೊಳ್ಳಬಹುದು.

ಪ್ರತಿಯೊಂದು ರಾಷ್ಟ್ರದ ಸಾಹಿತ್ಯವೂ ಅಲ್ಲಲ್ಲಿಯ ಸಾಂಸ್ಕೃತಿಕ ಬೇರಿನೊಂದಿಗೆ ಬೇರ್ಪಡಿಸಲಾರದ ಸಂಬಂಧವನ್ನು ಹೊಂದಿ ತನ್ನ ‘ಸ್ವ’ತ್ವವನ್ನು ವಿಶಿಷ್ಟವಾಗಿ ಮತ್ತು ವಿಶ್ವವ್ಯವಸ್ಥೆಗೆ ಪೂರಕವಾಗಿ ಅಭಿವ್ಯಕ್ತಿಯನ್ನು ಕಾಣುತ್ತದೆ. ಭಾರತೀಯ ಸಾಹಿತ್ಯದಲ್ಲಿ ಅಂಥ ಪ್ರಮುಖ ವಿಶಿಷ್ಟತೆಯಾಗಿ ನಾವು ಕಾಣಬಹುದಾದುದು ರಸ.

ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ – ಇವು ಒಂಭತ್ತು ರಸಗಳು ಸಾಹಿತ್ಯಕ್ಷೇತ್ರಕ್ಕೆ ಭಾರತ ನೀಡಿದ ಮಹತ್ತ್ವದ ಕೊಡುಗೆ. ಈ ಒಂಭತ್ತೂ ರಸಗಳಿಂದ ಯುಕ್ತವಾದ ಕೃತಿಯನ್ನು ಸಾಹಿತ್ಯಕೃತಿಯೆಂದು ಗುರುತಿಸುವ ಕ್ರಮ ಇಲ್ಲಿಯದು. ಕೆಲವೇ ರಸಗಳಿಂದ ಕೂಡಿದ ಕೃತಿಯು ಸಾಹಿತ್ಯಕೃತಿಯಾಗಿ ಪೂರ್ಣತೆಯನ್ನು ಪಡೆದಿಲ್ಲವೆಂಬುದೇ ಭಾವ. ರಸವೇ ಇಲ್ಲದ್ದು ಸಾಹಿತ್ಯವೆನಿಸದು. ವಿಚಾರವೇ ಪ್ರಧಾನವಾಗಿರುವ ಶಾಸ್ತ್ರಸಾಹಿತ್ಯದಲ್ಲಿ ರಸವಿರಬೇಕಿಲ್ಲ.

ರಸದ ಕುರಿತು ದಾರಿತಪ್ಪುವ ಸಾಧ್ಯತೆಗಳೂ ಇವೆಯೆನ್ನಿ. ಸೀತೆಯ ಬಳಿ ರಾವಣನು ಪ್ರೇಮಭಿಕ್ಷೆ ಬೇಡುವ ರಾಮಾಯಣದ ಪ್ರಸಂಗವು ಶೃಂಗಾರವಾಗುವುದಿಲ್ಲ. ಪಾಶ್ಚಾತ್ಯಸಾಹಿತ್ಯದಲ್ಲಿ ಈ ನಿಯಮ-ಮಡಿವಂತಿಕೆ ಇರಲಾರದು. ಅದಕ್ಕೆ ಅಲ್ಲಿಯ ಸಾಂಸ್ಕೃತಿಕ ಹಿನ್ನೆಲೆ ಕಾರಣ. ದುಷ್ಟನೊಬ್ಬ ತನ್ನ ಅಪರಾಧಕ್ಕಾಗಿ ಪಡೆಯುವ ಘೋರಶಿಕ್ಷೆಯು ಕರುಣರಸವೆನಿಸದು. ಹೀಗೆ ರಸವಿವರದೊಂದಿಗೆ ರಸವಿವೇಕವನ್ನೂ ಉಳ್ಳ ಭಾರತೀಯ ಸಾಹಿತ್ಯವು ತನ್ನ ‘ಸ್ವ’ತ್ವವನ್ನು ರಸದ ನೆಲೆಯಲ್ಲಿ ಕಂಡುಕೊಳ್ಳುತ್ತದೆ. ಹಾಗೆಯೇ ಸಂಸ್ಕೃತಿ, ತಾತ್ತ್ವಿಕತೆ ಇತ್ಯಾದಿ ಹತ್ತುಹಲವು ನೆಲೆಗಳಲ್ಲಿ ಭಾರತೀಯ ಸಾಹಿತ್ಯದ ‘ಸ್ವ’ತ್ವವನ್ನು ಗುರುತಿಸಲು ಸಾಧ್ಯ.

ದಾಳಿಕೋರ ಪರಕೀಯರ ಪ್ರಭಾವದಿಂದಾಗಿ ಸ್ವತ್ವದ ಹ್ರಾಸವು ಇಲ್ಲಿಯ ಸಾಹಿತ್ಯದಲ್ಲಿಯೂ ಘಟಿಸಿರುವುದು ಖೇದದ ಸಂಗತಿ. ಈ ಹ್ರಾಸವು ಈಗ ಅದೆಷ್ಟರ ಮಟ್ಟಿಗೆ ಸಾಗಿದೆಯೆಂದರೆ ನಮ್ಮ ಸ್ವತ್ವ ಯಾವುದೆಂಬುದನ್ನು ಕಂಡುಕೊಳ್ಳಲಾಗದಷ್ಟು, ಸ್ವತ್ವವೆಂದರೇನೆಂಬುದನ್ನು ತಿಳಿಯಲಾಗದಷ್ಟು! ಸಾಹಿತ್ಯಕ್ಷೇತ್ರದ ದಿಗ್ಗಜರೆನಿಸಿಕೊಂಡವರಲ್ಲಿಯೇ ಈ ಕುರಿತು ಗೊಂದಲವಿರುವುದು ವಿಷಾದದ ಸಂಗತಿ.

ಕಾಲದ ಹರಿವಿನಲ್ಲಿ ಯಾವ ಭ್ರಮೆಯೂ ಸ್ಥಿರವಲ್ಲ. ಹಾಗೆಂದು ಸ್ಥಿರವಾಗಿರುವ ಸಂಗತಿ ಇದ್ದೇ ಇದೆ. ತಿಳಿ ಆಕಾಶ ಸ್ಥಿರ. ಚಲಿಸುವ ಮೋಡಗಳು ಅಸ್ಥಿರ. ಸತ್ಯವು ಸ್ಥಿರ. ಭ್ರಮೆಯು ಅಸ್ಥಿರ. ಇದೀಗ ಭಾರತದ ಸಾಹಿತ್ಯಸೂರ್ಯ ತನ್ನನಾವರಿಸಿದ ಪರಕೀಯ ವಾದಸಿದ್ಧಾಂತಗಳ ಮೋಡಗಳಿಂದ ಮುಕ್ತನಾಗಿ ಪುನಃ ತನ್ನತನವನ್ನು ಕಂಡುಕೊಳ್ಳುವ ಕಾಲ. ತನ್ನ ಸ್ವತ್ವವನ್ನು ಅಭಿವ್ಯಕ್ತಿಸುವ ಕಾಲ. ಈ ನಿಟ್ಟಿನಲ್ಲಿ ಒಂದಷ್ಟು ಬೆಳಕುಚೆಲ್ಲಲು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಈ ಬಾರಿಯ ತನ್ನ ಅಧಿವೇಶನದಲ್ಲಿ ಸಂಕಲ್ಪಿಸಿದೆ.

ತಮ್ಮ ಕೃತಿಗಳಲ್ಲಿ ಸ್ವತ್ವವನ್ನು ಅಭಿವ್ಯಕ್ತಿಸುವ, ತಮ್ಮ ಅವಲೋಕನದಲ್ಲಿ ಸ್ವತ್ವದ ಕುರಿತು ತೊಡಗುವ, ತಮ್ಮ ಸಾಹಿತ್ಯಾಭ್ಯಾಸದಲ್ಲಿ ಸ್ವತ್ವವನ್ನು ಅನ್ವೇಷಿಸುವ, ಸ್ವತ್ವವನ್ನು ಆಗ್ರಹಿಸುವ ಪ್ರೀತಿಸುವ ಎಲ್ಲರೂ ಈ ಅಧಿವೇಶನದ ಭಾಗವಾಗಬೇಕೆಂಬುದು ಅಪೇಕ್ಷೆ.