ಪ್ರಮುಖ ಮೈಲಿಗಲ್ಲುಗಳು

೧. 2014ರ ವ್ಯಾಸಜಯಂತಿಯಂದು ಬೆಂಗಳೂರಿನಲ್ಲಿ ಹಿರಿಯ ಸಾಹಿತಿ ಬಾಬು ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪನವರಿಂದ ರಾಜ್ಯದ ಮೊದಲ ಘಟಕದ ಉದ್ಘಾಟನೆ. 

೨. 2016ರ  ಮೇ ತಿಂಗಳಲ್ಲಿ ಶಿರಸಿ ಸಮೀಪದ ಯಡಳ್ಳಿಯಲ್ಲಿ ನಡೆದ ಮೊದಲ ರಾಜ್ಯ ಅಧಿವೇಶನ. 

೩. 2017ರಲ್ಲಿ ಬೆಂಗಳೂರಿನಲ್ಲಿ ‘ದಕ್ಷಿಣ ಭಾರತದ ಜಾನಪದ ಸಾಹಿತ್ಯ’ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಸಂಗೋಷ್ಠಿ. 

೪. 2018ರ ಡಿಸೆಂಬರ್ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ  ಎರಡನೆಯ ರಾಜ್ಯ ಅಧಿವೇಶನ. 

೫. 2020ರಲ್ಲಿ ಕೊರೋನಾ ಸಂಕಷ್ಟಕಾಲದ ಲಾಕ್ಡೌನ್ ಸಂದರ್ಭದಲ್ಲಿ ಅಂತರ್ಜಾಲ ಕಾರ್ಯಕ್ರಮಗಳ ಮೂಲಕ ದಾಖಲೆಯ 138 ಸಾಹಿತ್ಯಕೂಟಗಳ ಉದ್ಘಾಟನೆ. ಸಾಹಿತ್ಯಕೂಟಗಳ ಮೂಲಕ ಮೊದಲ ಬಾರಿಗೆ ಎಲ್ಲ ಜಿಲ್ಲೆಗಳಿಗೆ ‘ಅಭಾಸಾಪ’ ಪ್ರವೇಶ. ‘ಅಭಾಸಾಪ’ದ 36 ಜಿಲ್ಲೆಗಳ ಪೈಕಿ 28ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ಹಾಗೂ 16 ತಾಲೂಕು ಸಮಿತಿಗಳ ಉದ್ಘಾಟನೆ. ಈ ಅಂತರ್ಜಾಲ ಕಾರ್ಯಕ್ರಮಗಳ ಮೂಲಕ ಅಭಾಸಾಪ’ ಕಾರ್ಯಕರ್ತರ ಸಂಖ್ಯೆ 350ಕ್ಕೆ ಏರಿಕೆ. ಅಂತರ್ಜಾಲ ಕಥಾಕಮ್ಮಟ ಮತ್ತು ನಾಟಕಕಮ್ಮಟಗಳ ಆಯೋಜನೆ. 

೬. 2021ರ ಮೇ ತಿಂಗಳಲ್ಲಿ ಅಂತರ್ಜಾಲ ಮೂಲಕ ಘೋಷಣಾ ಕಾರ್ಯಕ್ರಮ. 121 ಸಾಹಿತ್ಯಕೂಟಗಳು, 31 ಜಿಲ್ಲಾ ಸಮಿತಿಗಳು ಹಾಗೂ 43 ತಾಲೂಕು ಸಮಿತಿಗಳ ಘೋಷಣೆ. ಇದರ ಮೂಲಕ ‘ಅಭಾಸಾಪ’ಕ್ಕೆ ಲಭ್ಯವಾದ ಏಳುನೂರಕ್ಕೂ ಮೀರಿದ ಕಾರ್ಯಕರ್ತರ ತಂಡ. ಕ್ಲಬ್ ಹೌಸ್ ಕಾರ್ಯಕ್ರಮ ಆಯೋಜನೆ. 

೭. 2022ರ ಫೆಬ್ರವರಿ ತಿಂಗಳಲ್ಲಿ ಉಜಿರೆಯಲ್ಲಿ ನಡೆದ ಮೂರನೆಯ ರಾಜ್ಯ ಅಧಿವೇಶನ. 

೮. 2022ರಲ್ಲಿ ‘ಸ್ವರಾಜ್ಯ – ೭೫’ ಅಭಿಯಾನ: ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಭೇಟಿ ನೀಡಿ ಆ ಮನೆಗಳ ಹಿರಿಯರ ಸಮ್ಮಾನ ಮತ್ತು ಅಂಥ ಹೋರಾಟಗಾರರ ಕುರಿತು ವಿಚಾರಗೋಷ್ಠಿಗಳ ಆಯೋಜನೆ. 

೯. 2022ರ ನವೆಂಬರ್‌ನಲ್ಲಿ ಕಲ್ಲಡ್ಕದಲ್ಲಿ ನಡೆದ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮ. ರಾಜ್ಯದ 13 ಜಿಲ್ಲೆಗಳ ಆಯ್ದ 20 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಪ್ರಮುಖರನ್ನು ಈ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.

೧೦. ೨೦೨೩ರ ಡಿಸೆಂಬರ್ ತಿಂಗಳಲ್ಲಿ ‘ನಾ ಕಂಡಂತೆ ಲಕ್ಷ್ಮಣ’ ವಿಷಯದ ಮೇಲೆ ಶಿರಸಿ ಸಮೀಪದ ಉಮ್ಮಚಿಗೆಯ ಹಳ್ಳಿ ಪರಿಸರದಲ್ಲಿ ನಡೆದ ಪ್ರೌಢಶಾಲಾ ಹಂತದ ತನಕದ ವಿದ್ಯಾರ್ಥಿಗಳ ರಾಜ್ಯಮಟ್ಟದ ಗೋಷ್ಠಿ. ಈ ವಿಷಯದ ಮೇಲೆ ಐದೈದು ನಿಮಿಷ ಮಾತನಾಡಿದ ೧೮ ಮಕ್ಕಳು ರಾಜ್ಯದ ೧೩ ಜಿಲ್ಲೆಗಳಿಂದ ಬಂದಿದ್ದರು. ಇದರ ಎರಡನೆಯ ಆವೃತ್ತಿಯು ೨೦೨೪ರ ಅಕ್ಟೋಬರ್ ತಿಂಗಳಲ್ಲಿ ಇದೇ ಪರಿಸರದಲ್ಲಿ ವ್ಯಾಸಭಾಗವತದ ಕೃಷ್ಣನ ಕಿಶೋರಾವಸ್ಥೆಯ ತನಕದ ಕಥಾನಕದ ಮೇಲೆ ’ಮರಳಿ ಮಡಿಲಿಗೆ’ ಎಂಬ ಶೀರ್ಷಿಕೆಯಡಿ ನಡೆಯಿತು. ಈ ಗೋಷ್ಠಿಯಲ್ಲಿ ೧೯ ಜಿಲ್ಲೆಗಳಿಂದ ಆಯ್ಕೆಯಾದ ೨೪ ಮಕ್ಕಳು ಪ್ರಬಂಧಮಂಡಿಸಿದರು.

೧೧. ಶಿವಮೊಗ್ಗದ ಹಾದಿಗಲ್ಲು ಎಂಬ ಗ್ರಾಮದಲ್ಲಿ ‘ಅಭಾಸಾಪ’ದ ರಾಜ್ಯ ಸಮಿತಿಯು ಆಯೋಜಿಸಿದ ಒಂದು ದಿನದ “ಬಹುಭಾಷಾ ಕವಿಗೋಷ್ಠಿ” ಯು ಸಮಯಪಾಲನೆ, ಅಚ್ಚುಕಟ್ಟುತನ, ವಿಷಯನಿಷ್ಠ ಮಾತು, ಕೌಟುಂಬಿಕ ವಾತಾವರಣ ಇತ್ಯಾದಿ ಹಲವು ಕಾರಣಗಳಿಗಾಗಿ ಉಲ್ಲೇಖನೀಯ. ಇನ್ನೂರೈವತ್ತಕ್ಕೂ ಅಧಿಕ ಮಂದಿ ಕಾವ್ಯಾಸಕ್ತರು ಅವಧಿಪೂರ್ಣ ಭಾಗವಹಿಸಿದ್ದ ಈ ಕವಿಗೋಷ್ಠಿಯಲ್ಲಿ ೧೨ ಸ್ಥಳೀಯ ಭಾಷೆ ಹಾಗೂ ೧೩ ರಾಜ್ಯಸ್ತರದ ಭಾಷೆ, ಹೀಗೆ ಒಟ್ಟು ೨೫ ಭಾಷೆಗಳ ೪೯ ಕವಿಗಳು ಕವನಗಳನ್ನು ವಾಚಿಸಿದರು. ಹಾಗೆಯೇ; ವ್ಯಾಕರಣಲೋಕದ ಮೇರುವಿದ್ವಾಂಸರಾಗಿದ್ದ ವಿದ್ವಾನ್ ರಂಗನಾಥ ಶರ್ಮಾ ಅವರ ಜನ್ಮಶತಿ ನಿಮಿತ್ತ ವರ್ಷಪೂರ್ತಿ ರಾಜ್ಯದೆಲ್ಲೆಡೆ ಅವರ ಸಾಹಿತ್ಯದ ಮೇಲೆ ನಡೆದ ವಿವಿಧ ಗೋಷ್ಠಿಗಳ ಉದ್ಘಾಟನಾ ಕಾರ್ಯಕ್ರಮ ನಡೆದುದು ಅವರ ಹುಟ್ಟೂರು ಸೊರಬ ಸಮೀಪದ ನಡಹಳ್ಳಿಯಲ್ಲಿ. ಯಾವುದೇ ಭೇದವಿಲ್ಲದೆ ಎಲ್ಲ ಸಮುದಾಯದ ಮಂದಿ ಒಂದಾಗಿ ಸಹಕರಿಸಿ ನಡೆಸಿದ ಒಂದು ದಿನದ ಈ ಕಾರ್ಯಕ್ರಮವೂ ‘ಅಭಾಸಾಪ’ದ ಕಾರ್ಯದ ವಿಕಾಸದ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ಒಂದು ಮೈಲಿಗಲ್ಲಾಗಿ ಪರಿಣಮಿಸಿತು. ಸ್ವರಾಜ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಅಭಾಸಾಪ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಭೇಟಿನೀಡಿ ಆ ಮನೆಯ ಹಿರಿಯರನ್ನು ಸಮ್ಮಾನಿಸಿ ಸ್ವಾತಂತ್ರ್ಯಕ್ಕಾಗಿ ಅವರ ಕುಟುಂಬವು ನೀಡಿದ ಕೊಡುಗೆಯನ್ನು ಸ್ಮರಿಸಿದ ಸನ್ನಿವೇಶವು ಇನ್ನೊಂದು ಮಹತ್ತ್ವದ ಮೈಲಿಗಲ್ಲು. ಹಿರಿಯ – ಕಿರಿಯ ಸಾಹಿತ್ಯ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರಗಳು, ಸಂಸ್ಕೃತಕ್ಷೀತ್ರದ ಸಾಧಕರನ್ನು ಸಮ್ಮಾನಿಸುವ ಕಾರ್ಯಕ್ರಮಗಳು, ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಸಾಹಿತ್ಯಾಸಕ್ತ ಅಧ್ಯಾಪಕರ ನಡುವೆ ಸಹಿತಂ ಪ್ರಕಾರವು ಆಯೋಜಿಸುವ ಸಂಗೋಷ್ಠಿಗಳು, ನಮ್ಮ ಮೂಲಗ್ರಂಥಗಳ ಮೇಲೆ ಎರಡು ದಿನಗಳ ಕಾಲ ವಿವರವಾಗಿ ಚರ್ಚೆ ನಡೆಸುವ ಸ್ವಾಧ್ಯಾಯ ಪ್ರಕಾರದ ಅಧ್ಯಯನ ಶಿಬಿರಗಳು ಮುಂತಾದ ಹತ್ತುಹಲವು ವೈವಿಧ್ಯಪೂರ್ಣ ಪರಿಣಾಮಕಾರೀ ಕಾರ್ಯಕ್ರಮಗಳ ಆಯೋಜನೆಗಳ ಮೂಲಕ ಕರ್ನಾಟಕದ ‘ಅಭಾಸಾಪ’ ಕಾರ್ಯವು ಸಾಹಿತ್ಯ ಕ್ಷೇತ್ರಕ್ಕೆ ಒಂದಷ್ಟು ಕೊಡುಗೆಗಳನ್ನು ನೀಡುವಲ್ಲಿ ರತವಾಗಿದೆ