ಕನ್ನಡ ಶಾನೆ ಸಮ್ಮಾನ ಕಾರ್ಯಕ್ರಮ

ಕನ್ನಡ ಶಾಲೆ ಸಮ್ಮಾನ ಕಾರ್ಯಕ್ರಮ - ೨೦೨೪

ಕಲ್ಕಡ: ಭಾರತದ ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ ಇತ್ಯಾದಿ ಎಲ್ಲವೂ ಸಮಾಜವನ್ನು ಆನಂದದ ಕಡೆಗೆ ಒಯ್ಯುವ ಸ್ವಭಾವವನ್ನು ಹೊಂದಿವೆ ಎಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಕಲ್ಲಡ್ಕದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡಶಾಲೆಗಳ ಸಮ್ಮಾನ ಕಾರ್ಯಕ್ರಮದಲ್ಲಿ ಸಮಾರೋಪ ಮಾತುಗಳನ್ನಾಡಿ ಈ ವಿಷಯ ಹೇಳಿದರು.

ಹೀಬ್ರೂ ಭಾಷೆಯನ್ನು ಪುನಃಚೇತರಿಸಿ ತಮ್ಮ ಶಿಕ್ಷಣ, ಆಡಳಿತ, ಸಂಶೋಧನೆ ಇತ್ಯಾದಿಗಳನ್ನು ಅದೇ ದೇಶೀಭಾಷೆಯಲ್ಲಿ ಸಾಧಿಸುತ್ತಿರುವ ಇಸ್ರೇಲ್ ಜಗತ್ತಿನಲ್ಲಿಯೇ ಶಕ್ತಿಶಾಲಿ ದೇಶವಾಗಿ ಪ್ರಕಟವಾಗುತ್ತಿದೆ. ಭಾಷೆಯು ನಮ್ಮ ಸಂಸ್ಕೃತಿ, ಪರಂಪರೆಗಳನ್ನಷ್ಟೆ ಅಲ್ಲದೆ ನಮ್ಮ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸುವ ದ್ರವ್ಯವನ್ನು ಹೊಂದಿದೆ ಎಂದರು.

ಎಲ್ಲರಿಗೂ ಒಳಿತಾಗಲಿ ಶುಭವಾಗಲಿ ಎಂದು ಹಾರೈಸುವ ಭಾರತೀಯ ಭಾಷೆಗಳ ಭಾವವನ್ನು ಇನ್ನೊಂದರಲ್ಲಿ ಕಾಣುವುದು ಅಸಾಧ್ಯ. ಜಗತ್ತಿಗೇ ಮಂಗಳವಾಗಬೇಕೆಂದು ಬಯಸುವ ಭಾರತೀಯ ಭಾವವನ್ನು ಕಟ್ಟಿಕೊಡುವ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಲು ಅದೇ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಕಾರ್ಯವನ್ನು ಮಾಡಬೇಕಿದೆ ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಈ ಶಾಲೆಗಳಿಗೆ ಸಮ್ಮಾನಿಸಲಾಯಿತು:

  • ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಜೈಹಿಂದ್ ಪ್ರೌಢಶಾಲೆ
  • ಯಾದಗಿರಿ ಜಿಲ್ಲೆಯ ಶಹಾಪುರದ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆ
  • ಉಡುಪಿ ಜಿಲ್ಲೆ ಕೋಟೇಶ್ವರದ ಶಾಂತಿಧಾಮ ಪೂರ್ವ ಗುರುಕುಲ
  • ಮೈಸೂರಿನ ಕೃಷ್ಣಮೂರ್ತಿಪುರಂದಲ್ಲಿರುವ ವನಿತಾ ಸದನ ಪ್ರಾಥಮಿಕ ಮತ್ತು ಪ್ರೌಢಶಾಲೆ
  • ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ

ಸಮ್ಮಾನಿತ ಶಾಲೆಗಳ ಪ್ರತಿನಿಧಿಯಾಗಿ ಮೈಸೂರಿನ ವನಿತಾ ಸದನದ ಉಪಾಧ್ಯಕ್ಷರಾದ ಶ್ರೀಮತಿ ರಾಧಾ ಅವರು ಅನಿಸಿಕೆಗಳನ್ನು ಮಂಡಿಸಿದರು.

ಸಾಧನೆಗೆ ಕನ್ನಡವೇ ಅಡಿಪಾಯ: ಕನ್ನಡಶಾಲೆಗಳ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಶಾಂತಾರಾಮ ಶೆಟ್ಟಿ

ಕನ್ನಡಶಾಲೆಯಲ್ಲಿ ಓದಿದ ಕಾರಣವೇ ತನಗೆ ಲೆಕ್ಕಪರಿಶೋಧನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಮಂಗಳೂರಿನ ಪ್ರಸಿದ್ಧ ಲೆಕ್ಕಪರಿಶೋಧಕರಾದ ಸಿಎ ಶಾಂತಾರಾಮ ಶೆಟ್ಟಿ ಅವರು ಹೇಳಿದರು. ಭಾರತೀಯ ಸಂಸ್ಕೃತಿಯ ಸತ್ತ್ವವನ್ನು ಮುಂಪೀಳಿಗೆಗೆ ಸಂವಹನಮಾಡುವ ಕಾರ್ಯವನ್ನು ಕನ್ನಡದಂಥ ಭಾರತೀಯ ಭಾಷೆಗಳ ಮಾಧ್ಯಮದ ಶಿಕ್ಷಣ ಮಾತ್ರ ಸಾಧ್ಯ ಎಂದವರು ಹೇಳಿದರು.

ದಿಕ್ಸೂಚಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಪರ್ಕ ಪ್ರಮುಖ್ ಡಾ. ವಿ. ರಂಗನಾಥ ಅವರು, ಭಾರತೀಯ ಭಾಷೆಗಳ ನಡುವೆ ಇರಬೇಕಾದುದು ಸಾಮರಸ್ಯವೇ ವಿನಾ ಸಂಘರ್ಷವಲ್ಲ ಎಂದು ಹೇಳಿದರು.

ಮಾತೃಭಾಷೆ ಕನ್ನಡವನ್ನು ಮಾತನಾಡಲು ಗೊತ್ತಿಲ್ಲದ ಮೊಮ್ಮಗನೊಂದಿಗೆ ಸಂವಹನಮಾಡಲು ಇಂಗ್ಲಿಷ್ ಗೊತ್ತಿಲ್ಲದ ತಾತ ಇಂಗ್ಲಿಷ್ ಭಾಷೆಯನ್ನು ಕಲಿಯುವ ಬೆಂಗಳೂರಿನ ಮನೆಯೊಂದರ ವಿಕೃತದೃಶ್ಯವನ್ನು ಉದಾಹರಿಸಿದ ಅವರು, ಆಂಗ್ಲಶಾಪವು ಹೇಗೆ ಹೇಗೆ ನಮ್ಮನ್ನು ಆಕ್ಟೋಪಸ್ಸಿನಂತೆ ಸುತ್ತಿಕೊಂಡಿದೆ ಎಂಬುದನ್ನು ವಿವರಿಸಿದರು.

ಕನ್ನಡ ಕುರಿತು ಕನ್ನಡಿಗರಲ್ಲಿಯೇ ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇರುವ ಸಂದರ್ಭವನ್ನು ಉಲ್ಲೇಖಿಸಿದ ಅವರು; ‘ಬಾರಿಸು ಕನ್ನಡ ಡಿಂಡಿಮವ..’, ‘ಜಯ ಭಾರತ ಜನನಿಯ ತನುಜಾತೆ..’ ಇತ್ಯಾದಿ ಕವಿತೆಗಳ ಮೂಲಕ ಕನ್ನಡದ ಕವಿಗಳು ಗೈದ ಪ್ರಯತ್ನಗಳನ್ನು ವರ್ಣಿಸಿದರು.

ಅವರು ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದಲ್ಲಿ ವಿವಿಧ ವ್ಯವಸ್ಥೆಗಳ ಮೂಲಕ ಕಾರ್ಯಮಾಡುವ ವಿವರವನ್ನು ನೀಡಿದರು.

ಸವಾಲುಗಳಿದ್ದಲ್ಲಿ ಪರಿಹಾರವೂ ಇದೆ: ಕನ್ನಡಶಾಲೆಗಳ ಸಮ್ಮಾನ ಕಾರ್ಯಕ್ರಮದಲ್ಲಿ ರಾಜಾರಾಮ

ಇಸ್ರೋದ ಪ್ರಮುಖರಾದ ಸಿ. ಎನ್. ಆರ್. ರಾವ್, ಕಿರಣ ಕುಮಾರ್ ಮುಂತಾದವರು ಕನ್ನಡಮಾಧ್ಯಮದಲ್ಲಿ ಓದಿದ್ದಷ್ಟೆ ಅಲ್ಲ, ಸಾರ್ವಜನಿಕವಾಗಿ ಕನ್ನಡದಲ್ಲೇ ವ್ಯವಹರಿಸುತ್ತಿದ್ದರು ಮತ್ತು ಭಾಷಣವನ್ನೂ ಕನ್ನಡದಲ್ಲೇ ಮಾಡುತ್ತಿದ್ದರು ಎಂದು ಶಿಕ್ಷಣತಜ್ಞರೂ ಹೊಳೆಹೊನ್ನೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮುಖ್ಯಸ್ಥರೂ ಆದ ಶ್ರೀ ರಾಜಾರಾಮ ಅವರು ಹೇಳಿದರು. ಕಾರ್ಯಕ್ರಮದಲ್ಲಿ ‘ಕನ್ನಡಶಾಲೆಗಳ ಮುಂದಿರುವ ಸವಾಲು ಮತ್ತು ಸಮಾಧಾನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ತಮ್ಮ ಮಕ್ಕಳ ನಡವಳಿಕೆಗಳಲ್ಲಿ ಸುಧಾರಣೆಯನ್ನು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟ ತಾಯಂದಿರ ಕುರಿತು ಉದಾಹರಣೆ ಸಹಿತ ವಿವರಿಸಿದ ಅವರು, ವಿದ್ಯಾಭಾರತಿಯಂಥ ಸಂಸ್ಕಾರಪ್ರದಾನಿಸುವ ಶಾಲೆಗಳು ಈ ನಿಟ್ಟಿನಲ್ಲಿ ಒಂದು ಉತ್ತಮ ಭರವಸೆ ಎಂದರು.

ಒಂದೆಡೆ ಕೂಲಿಗೆಲಸ ಮಾಡುತ್ತ ಕಷ್ಟದ ಬದುಕನ್ನು ನಡೆಸಿದರೂ ಆರ್ಥಿಕ ಭವಿಷ್ಯದ ಬಗ್ಗೆ ಕಾಳಜಿವಹಿಸಿ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಕಳಿಸುತ್ತಿದ್ದರೆ, ಇನ್ನೊಂದೆಡೆ ತಮ್ಮ ಮಕ್ಕಳ ಸಂಸ್ಕಾರಯುತ ಭವಿಷ್ಯವನ್ನು ಪ್ರತೀಕ್ಷಿಸುವ ಉನ್ನತ ಅಧಿಕಾರಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸುವ ದೃಷ್ಟಾಂತಗಳೂ ನಮ್ಮ ಕಣ್ಣಮುಂದೆ ಹೇರಳವಾಗಿವೆ ಎಂದು ಅವರು ವಿವರಿಸಿದರು.

ಸವಾಲು ಇರುವಲ್ಲಿ ಸಮಾಧಾನ ಇದ್ದೇ ಇರುತ್ತದೆ. ಕನ್ನಡಶಾಲೆಗಳು ಒಂದೆಡೆ ಮುಚ್ಚುತ್ತಿರುವುದು ಮತ್ತು ಆಂಗ್ಲಮಾಧ್ಯಮ ಶಾಲೆಗಳು ಮೈಕೊಬ್ಬಿ ಮೆರೆಯುತ್ತಿರುವುದು ದೊಡ್ಡ ಸವಾಲೇ ಆಗಿದೆ. ಆದರೆ ಈ ಸವಾಲಿಗೆ ಅತ್ಯಂತ ಯಶಸ್ವಿಯಾಗಿ ಉತ್ತರ ಕಂಡುಕೊಳ್ಳಲು ಸಾಧ್ಯ ಎಂದು ಭರವಸೆಯ ಮಾತನಾಡಿದರು. ಜಾತೀಯತೆ, ಭ್ರಷ್ಟಾಚಾರ, ಅತ್ಯಾಚಾರ ಇತ್ಯಾದಿ ಹತ್ತುಹಲವು ಸಾಮಾಜಿಕ ಕೇಡುಗಳಿಂದ ತ್ರಸ್ತಗೊಳ್ಳುತ್ತಿರುವ ರಾಷ್ಟ್ರದ ಸವಾಲುಗಳನ್ನು ಉತ್ತಮ ಸಂಸ್ಕಾರದ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿ ಎದುರಿಸಲು ಸಾಧ್ಯ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧೆಡೆಗಳಿಂದ ಆಗಮಿಸಿದ್ದ ಕನ್ನಡಶಾಲೆಗಳ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಶಿಕ್ಷಕರು ತಾವು ಎದುರಿಸುತ್ತಿರುವ ಸವಾಲುಗಳು ಹಾಗೂ ಅದನ್ನು ಪರಿಹರಿಸಿಕೊಂಡ ವಿವರಗಳನ್ನು ಹಂಚಿಕೊಂಡರು.

ಈ ಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಂದನ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ‘ಅಭಾಸಾಪ’ದ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ರಾಮಚಂದ್ರ ಅವರು ನಿರೂಪಿಸಿದರು. ಬಂಟ್ವಾಳ ತಾಲೂಕು ಅಧ್ಯಕ್ಷರಾದ ರಾಜಮಣಿ ರಾಮಕುಂಜ ಅವರು ವಂದಿಸಿದರು.

Leave a Reply

Your email address will not be published. Required fields are marked *