ಅಧಿಷ್ಠಾನ

         ಭಾರತದ ಭಾವಸಮೃದ್ಧಿ ಮತ್ತು ಶಾಸ್ತ್ರಸಂಪತ್ತು ದೇಶದ ಎಲ್ಲ ಭಾಷೆಗಳಿಂದಲೂ ತುಂಬಿಬಂದಿದೆ. ಭಾರತವೆಂದರೆ ಕೇವಲ ಭೂಪಟವಲ್ಲ, ಮಾನವ ಉನ್ನತಿಯ ಪರಮಸಾಧ್ಯತೆಗಳನ್ನು ಶೋಧಿಸಿದ ಸಂಸ್ಕೃತಿ. ಮಾತನ್ನು ಮಂತ್ರವಾಗಿಸಿದ ಮಣ್ಣದು. ಈ ಶೋಧದಲ್ಲಿ ಬೋಧದಲ್ಲಿ ಸಾಧಕರನ್ನು ಕೈಹಿಡಿದು ನಡೆಸಿದ್ದು ಭಾಷೆ. ಆ ಭಾಷೆಯಿಂದ ಅಭಿವ್ಯಕ್ತವಾದ ಎಲ್ಲ ರೂಪಗಳೂ ಸಾಹಿತ್ಯವೇ. ಈ ಎಲ್ಲ ಭಾವ-ಭಾಷೆಗಳಿಗೆ ಆಶ್ರಯವಾದದ್ದು ಮಾತೃಸ್ವರೂಪಿಯಾದ ಭಾರತ. ಭಾರತೀಯ ಭಾಷೆ-ಉಪಭಾಷೆಗಳೂ ಭಾವಸಂವೇದನೆಗಳೂ ಉಳಿಯಬೇಕಾದರೆ ಭಾರತ ಉಳಿಯಬೇಕು. 

         ಅಭಿಜಾತವಾದ ಭಾರತೀಯತೆ ಪ್ರತಿ ಪೀಳಿಗೆಯಲ್ಲೂ ಮುಂದುವರಿಯಬೇಕೆಂದರೆ ಎಲ್ಲ ಕಾಲದ ಸಾಹಿತ್ಯದಲ್ಲಿಯೂ ಅದು ಪ್ರತಿಫಲನಗೊಳ್ಳಬೇಕು. ಸಾವಿರ ವರ್ಷಗಳ ಆಕ್ರಮಣ ಅತಿಕ್ರಮಣಗಳನ್ನು ಕಂಡ ಭಾರತದಲ್ಲಿ ಮತಾಂತರವಾದಾಗಲೆಲ್ಲ ಭಾವ-ಭಾಷೆಗಳೂ ಬದಲಾಗುತ್ತವೆ ಎನ್ನುವುದನ್ನು ಗಮನಿಸಿದ್ದೇವೆ. ಈ ಮತಾಂತರ ಭೌತಿಕವಾಗಿ ಆದಾಗಷ್ಟೆ ಅಲ್ಲ, ಬೌದ್ಧಿಕವಾಗಿ ಆದಾಗಲೂ ಆತಂಕ ತಪ್ಪಿದ್ದಲ್ಲ. ಅಚ್ಚಗನ್ನಡ ಮಾತಾಡುತ್ತಲೇ ಸಾರ್ವಜನಿಕವಾಗಿ ಆಕಳ ಮಾಂಸವನ್ನು ಭಕ್ಷಿಸಿದ, ಭಾರತವಿರೋಧೀ ಘೋಷಣೆ ಹಾಕಿದವರನ್ನು ಬೆಂಬಲಿಸಿದ, ಭಯೋತ್ಪಾದಕರನ್ನು ಸಮರ್ಥಿಸಿದ ಸಾಹಿತಿಗಳ ಭಾವ-ಭಾಷೆಗಳು ಭಾರತೀಯವೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆಯಲ್ಲವೇ? 

         ಪ್ರಾಚೀನವೆಷ್ಟೋ ಅಷ್ಟೇ ಆಧುನಿಕವೂ ಕೂಡಾ ಎಂಬರ್ಥವನ್ನು ಸೂಚಿಸುವ ವಿಶಿಷ್ಟ ಶಬ್ದ – ‘ಸನಾತನ’. ಅದು ನಮ್ಮ ಗುರುತೂ ಹೌದು. ಅಂದರೆ ಅತಿಪ್ರಾಚೀನತೆಯೂ ನಿತ್ಯನೂತನತೆಯೂ ನಮಗೆ ಸ್ವಭಾವ. ಆದರೂ ನಮ್ಮದು ಹಳತಾಯಿತು ಎಂದು ನಂಬಿಸಿ ಪಾಶ್ಚಾತ್ಯವಾದುದು ಮಾತ್ರ ಹೊಸತೆಂದು ಬಿಂಬಿಸುವ ಯತ್ನ ನಿರಂತರ ನಡೆದಿದೆ ಸಾಹಿತ್ಯದಲ್ಲಿ. ಸುದ್ದಿಯಿಂದ ಶೋಧದವರೆಗೆ, ಕಥೆಯಿಂದ ಕಾವ್ಯದವರೆಗೆ ಎಲ್ಲದರಲ್ಲೂ ಭಾರತೀಯ ಶ್ರದ್ಧೆಯನ್ನು ಅಣಕಿಸುವ ಅಲ್ಲಗಳೆಯುವ ಯೋಜಿತ ಹುನ್ನಾರವೊಂದಿದೆ. ವೇದದ ಉಪನಿಷತ್ತಿನ ಅನುವಾದಕ್ಕೆ ಮನಸ್ಸು ಮಾಡಿದ್ದೇ ಭಾರತೀಯ ಅಸ್ಮಿತೆಯನ್ನು ಪ್ರಶ್ನಿಸಿ ಜನಮನವನ್ನು ಮತಾಂತರಕ್ಕೆ ಹದಗೊಳಿಸುವುದಕ್ಕೆ ಎಂದ ಪಾಶ್ಚಾತ್ಯ ಸೂರಿಗಳ ಮಾತನ್ನು ಮರೆಯುವುದಕ್ಕುಂಟೆ! 

         ಸತ್ತ್ವದಲ್ಲಿ ಕೊರತೆಯಾದಾಗ ಮಾತ್ರ ಮರಕ್ಕೆ ಗೆದ್ದಲು ಹಿಡಿಯುತ್ತದೆ. ಭಾರತದ ಸಾಹಿತ್ಯದ ಆಲದ ಮರಕ್ಕೆ ಸತ್ತ್ವದ ಕೊರತೆಯಾಗದಂತೆ ಪ್ರತಿ ಬಿಳಲಿನಲ್ಲೂ ಭಾರತೀಯತೆಯನ್ನು ಅರ್ಥಾತ್ ಶುದ್ಧ ಮಾನವೀಯ ಸಂವೇದನೆಯನ್ನು ತುಂಬುವ ಕಾರ್ಯ ಸಾಹಿತ್ಯಲೋಕದಲ್ಲಿ ಆಗಬೇಕು. ಮಾಧ್ಯಮದಿಂದ ಮಹಾಕಾವ್ಯದವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಆಗ್ರಹವಿಲ್ಲದ ಸತ್ಯಶೋಧಕ್ಕೆ, ಪೂರ್ವಗ್ರಹವಿಲ್ಲದ ಸೌಂದರ್ಯದ ಆರಾಧನೆಗೆ ಅವಕಾಶವಿರಬೇಕು. ಸೃಷ್ಟಿ ಇರುವುದೇ ಮನುಷ್ಯನ ಭೋಗಕ್ಕೆ ಎಂಬ ಪರಕೀಯ ಸಿದ್ಧಾಂತವನ್ನೂ ಇಂದ್ರಿಯಾನುಭವವೇ ಪರಮಪ್ರಮಾಣವೆಂಬ ಬೌದ್ಧಿಕ ಆಕ್ರಮಣವನ್ನೂ ಎದುರಿಸುವ ಸಾಹಿತ್ಯದ ಅಗತ್ಯವಿದೆ. ಮತ್ತು ಈ ಸಾಹಿತ್ಯದ ಸಂವೇದನೆಗೆ ಅಖಂಡ ಭಾರತದ ಸಂಘಟಿತಶಕ್ತಿಯ ಸಂಚಲನವೂ ಆಗಬೇಕಾಗಿದೆ. 

         ಅಕ್ಷರಸಂಸ್ಕೃತಿಯ ಉಪಾಸನೆಯಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆಹಾಕೋಣ. ಬರೆಯುತ್ತ ಓದುತ್ತ ಅಭಿವ್ಯಕ್ತಿಯ ಎಲ್ಲ ಪ್ರಕಾರಗಳಲ್ಲಿ, ಎಲ್ಲ ಭಾಷೆಗಳಲ್ಲಿ ಭಾರತೀಯ ಪ್ರಜ್ಞೆಯನ್ನು ಜಾಗೃತಗೊಳಿಸೋಣ. ವೈಚಾರಿಕ ವಾಸ್ತವವನ್ನು ಎದುರಿಸುವ, ಕಲ್ಪನೆಯ ಕಾವ್ಯವನ್ನು ಕಟ್ಟುವ ಕ್ಷಮತೆ ನಮ್ಮದಾಗಲಿ. ಎಲ್ಲ ವೈವಿಧ್ಯಗಳೊಂದಿಗೆ ಬರಹ ಭಾರತೀಯವಾಗಲಿ. ಸಾಹಿತ್ಯಚಿಂತನೆಯ ಸ್ವಾತಂತ್ರ್ಯದೊಂದಿಗೇ ಸಂಘಟಿತ ಅಭಿವ್ಯಕ್ತಿಯ ಆವಶ್ಯಕತೆಯನ್ನೂ ಮನಗಂಡು ಮುನ್ನಡೆಯೋಣ.