ರಾಜ್ಯದಲ್ಲಿ ಇದೀಗ ಸಂಘಟನೆಯ ಕಾರ್ಯವಿಕಾಸದ ದೃಷ್ಟಿಯಿಂದ ಮೂರು ಮುಖಗಳಲ್ಲಿ ಕಾರ್ಯವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಅವು: ಸಾಹಿತ್ಯ ಕೂಟ, ಸಮಿತಿ ಮತ್ತು ಪ್ರಕಾರ.
ಸಾಹಿತ್ಯ ಕೂಟ: ಇದು ಜಿಲ್ಲೆ, ತಾಲೂಕು ಇತ್ಯಾದಿ ಯಾವುದೇ ನಿರ್ದಿಷ್ಟ ವ್ಯಾಪ್ತಿಯಿಲ್ಲದೆ ಕೆಲಸಮಾಡುವ ವ್ಯಕ್ತಿತ್ವನಿರ್ಮಾಣದ ವ್ಯವಸ್ಥೆ. ಕನಿಷ್ಠ ಹತ್ತರಿಂದ ಗರಿಷ್ಠ ಇಪ್ಪತ್ತೈದರವರೆಗೆ ಸಾಹಿತ್ಯಾಸಕ್ತರಿರುವ ಈ ತಂಡದ ನೇತೃತ್ವ ಸಂಚಾಲಕರದು. ವಾರಕ್ಕೊಮ್ಮೆ ಈ ತಂಡದ ಸದಸ್ಯರು ಮಾತ್ರ ಸೇರಿಕೊಂಡು ಎಲ್ಲರ ಸಹಭಾಗಿತ್ವ ಇರುವಂಥ ಯಾವುದಾದರೂ ಒಂದು ಸಾಹಿತ್ಯದ ಚಟುವಟಿಕೆಯನ್ನು ಸಂಚಾಲಕರು ಆಯೋಜಿಸುತ್ತಾರೆ. ಇಡಿಯ ತಂಡವು ಒಂದು ಉತ್ತಮ ಸಾಹಿತ್ಯಕ ತಂಡವಾಗಿ ಬೆಳೆಯುವ ರೀತಿಯ ಚಟುವಟಿಕೆಯಿದು.
ಸಮಿತಿ: ಇದು ರಾಜ್ಯ, ಜಿಲ್ಲೆ ಮತ್ತು ತಾಲೂಕು ಹೀಗೆ ಮೂರು ಸ್ತರದಲ್ಲಿ ಇರುವ ಒಂದು ಕಾರ್ಯಕರ್ತರ ತಂಡ. ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಾಹಿತ್ಯಾಸಕ್ತರಿಗಾಗಿ ಒಂದಲ್ಲ ಒಂದು ಬಗೆಯ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವ ಸಮಿತಿಯು ಸಾಹಿತ್ಯದ ಮೂಲಕ ‘ಅಭಾಸಾಪ’ದ ಧ್ಯೇಯವನ್ನೂ ಸಾಹಿತ್ಯಕ ಮೌಲ್ಯಗಳನ್ನು ಜಾಗೃತಗೊಳಿಸುತ್ತ ಸಾಹಿತ್ಯಾಸಕ್ತರೆಲ್ಲರನ್ನೂ ತಲಪುವ ಪ್ರಯತ್ನವನ್ನು ಮಾಡುತ್ತದೆ. ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಕಾರ್ಯದರ್ಶಿ ಇರುವುದು ಅನಿವಾರ್ಯ. ಕಾರ್ಯದರ್ಶಿಗೆ ಪೂರಕರಾಗಿ ಅಧ್ಯಕ್ಷ ಮತ್ತು ಖಜಾಂಚಿ ಸೇರಿದಂತೆ ಸಮಿತಿಯಲ್ಲಿ ಕನಿಷ್ಠ ಮೂರರಿಂದ 15ರವರೆಗೆ ಸದಸ್ಯರಿರುತ್ತಾರೆ.
ಪ್ರಕಾರ: ಪ್ರಕಾರ ಎನ್ನುವುದು ಸಾಹಿತ್ಯದಲ್ಲಿ ಒಂದು ಪಾರಿಭಾಷಿಕ ಪದ. ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ – ಇವು ಸಾಹಿತ್ಯದ ಪ್ರಕಾರಗಳೇ. ಜತೆಗೆ ಜಾನಪದ ಸಾಹಿತ್ಯ, ದಾಸಸಾಹಿತ್ಯ, ವಚನಸಾಹಿತ್ಯ ಇತ್ಯಾದಿ ಪ್ರಕಾರಗಳೂ ಇವೆ. ಸಾಹಿತ್ಯಾತ್ಮಕವಾದ ಈಯೆಲ್ಲ ಪ್ರಕಾರಗಳಲ್ಲಿಯೂ ‘ಅಭಾಸಾಪ’ ತನ್ನ ಸಂಘಟನೆಯ ಕಾರ್ಯವನ್ನು ವಿಸ್ತರಿಸುತ್ತಿದೆ. ಜತೆಗೆ; ಪ್ರೌಢಶಾಲಾ ಹಂತದವರೆಗಿನ ಮಕ್ಕಳ ಘಟಕ, ಕಾಲೇಜು ಹಂತದ ವಿದ್ಯಾರ್ಥಿ ಘಟಕ, ಮಹಿಳಾ ಘಟಕ, ವಕೀಲರು ಅಭಿಯಂತರರು ಇತ್ಯಾದಿ ವೃತ್ತಿ ಆಧಾರಿತ ಘಟಕ, ಕ್ಲಬ್ಹೌಸ್ ಕಾರ್ಯಕ್ರಮ, ಸಾಮಾಜಿಕ ಜಾಲತಾಣ, ಪುಸ್ತಕ ಪ್ರಕಾಶನ ಮುಂತಾದ ವ್ಯವಸ್ಥಾತ್ಮಕ ಪ್ರಕಾರಗಳಲ್ಲಿಯೂ ಅದು ತನ್ನ ಕಾರ್ಯವನ್ನು ವಿಸ್ತರಿಸುತ್ತಿದೆ.