ಮಹಾಭಾರತದೊಳಗಿನ ಹಾಸ್ಯ

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ದಕ್ಷಿಣದ ಹಾಗೂ ಸುಚಿತ್ರ ಫಿಲಂ ಸೊಸೈಟಿ ವತಿಯಿಂದ ಬೆಂಗಳೂರಿನ ಬನಶಂಕರಿಯ ಸುಚಿತ್ರದಲ್ಲಿನ ನಾಣಿಯಂಗಳದಲ್ಲಿ “ಹಾಸ್ಯದಿಗ್ಗಜರ ಕರ್ಣ ರಸಾಯನ” ಎಂಬ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ದಕ್ಷಿಣದ ಅಧ್ಯಕ್ಷರೂ, ಖ್ಯಾತ ಕವಿಗಳೂ, ಸಂಘಟಕರೂ ಆದ ಡಾ.ಭಾನುರವರು ವಹಿಸಿದ್ದರು. ವೇದಿಕೆಯಲ್ಲಿ ಹಾಸ್ಯ ದಿಗ್ಗಜರಲ್ಲಿ ಒಬ್ಬರಾದ ಶ್ರೀಯುತ ವೈ. ವಿ. ಗುಂಡೂರಾವ್ ಮತ್ತು ಅಣಕು ರಾಮನಾಥ ಎಂದೇ ಪ್ರಖ್ಯಾತರಾದ ಶ್ರೀಯುತ ರಾಮನಾಥರು ಮುಖ್ಯ ಅತಿಥಿಗಳಾಗಿ ವೇದಿಕೆಯ ಮೆರುಗನ್ನು ಹೆಚ್ಚಿಸಿದರು.

ಕುಮಾರಿ ಆದ್ಯ ಶಾಬಾದಿಯವರ ಸೊಗಸಾದ ಗಣಪತಿ ಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಹಾಭಾರತದೊಳಗಿನ ಹಾಸ್ಯ ಮತ್ತು ರಸವತ್ತಾದ ಪ್ರಸಂಗಗಳ ಮೆಲುಕು ಸೊಗಸಾಗಿ ನಡೆಯಿತು.

ಮೊದಲಿಗೆ ಅಣಕು ರಾಮನಾಥರು ಮಾತನಾಡಿ, ಶಂತನು ಗಂಗೆಯ ಸೌಂದರ್ಯಕ್ಕೆ ಮಾರುಹೋಗಿ ಅವಳ ಎಲ್ಲಾ ಮಾತುಗಳಿಗೂ ತಲೆ ಅಲ್ಲಾಡಿಸಿದನು. ಈಗಲೂ ಅಷ್ಟೆ, ಒಮ್ಮೆ ಸುಂದರ ಹುಡುಗಿ ಒಪ್ಪಿಕೊಂಡರೆ ಸಾಕು ಅನ್ನುವ ಕಾರಣಕ್ಕೆ ಅವಳು ಹೇಳಿದ್ದಕ್ಕೆಲ್ಲ ಸರಿ ಎಂದು ತಲೆ ಅಲ್ಲಾಡಿಸಿದರೆ, ಮುಂದಕ್ಕೆ ಶಂತನುವಿನ ಹಾಗೆಯೇ ಸಂಕಟ ಪಡಬೇಕಾದೀತು. ಶಂತನು ಪ್ರಾಯಶಃ ಗಂಗೆಯಲ್ಲಿ ತುಂಬಾ ಮುಳುಗಿದ್ದ, ಹೀಗಾಗಿ ಅವನಿಗೆ ಶೀತ ಆಗಿರಬೇಕು. ಇಲ್ಲದಿದ್ದರೆ ಮತ್ಸ್ಯಗಂಧಿಯನ್ನು ಪ್ರೇಮಿಸುತ್ತಿದ್ದನೇ? ಎಂದು ಸಭೆಯನ್ನು ನಗೆಗಡಲಲ್ಲಿ ತೇಲಾಡಿಸಿದರು.

ನಂತರದಲ್ಲಿ ಮಾತನಾಡಿದ ವೈ.ವಿ.ಗುಂಡೂರಾಯರು, ಕರ್ಣ ದುಷ್ಟತನದಲ್ಲಿ ಯಾವ ರೀತಿಯಿಂದಲೂ ಕಡಿಮೆ ಇಲ್ಲ, ಆದರೂ ಕರ್ಣನನ್ನು ದುರಂತ ನಾಯಕನಾಗಿ ಬಿಂಬಿಸಲಾಗುತ್ತಿದೆ. ರಾಮನನ್ನು ಹತ್ತಿರದಿಂದ ಕಂಡವರು ವಾಲ್ಮೀಕಿಯವರು, ಹಾಗೆಯೇ ಪಾಂಡವರನ್ನು, ಕೌರವರನ್ನು, ಕರ್ಣನನ್ನು ಹತ್ತಿರದಿಂದ ಕಂಡವರು ವ್ಯಾಸರು. ಹೀಗಾಗಿ ಕರ್ಣ ದುಷ್ಟನೋ, ದುರ್ಯೋಧನ ಎಂತಹವನು ಅನ್ನುವ ನಿರ್ಧಾರಕ್ಕೆ ವ್ಯಾಸರ ಮಾತುಗಳು ಆಧಾರವೇ ಹೊರತು, ಬೇರೆಯವರು ಬರೆದ ಮಹಾಭಾರತ, ರಾಮಾಯಣಗಳಲ್ಲ ಎಂದರು. ನಂತರ ಮುಂದುವರೆದು; ದುರ್ಯೋಧನ, ದುಶ್ಯಾಸನ, ಶಕುನಿ, ಕರ್ಣನಂತಹ ದುಷ್ಟ ಚತುಷ್ಟಯ ಈಗಲೂ ಇದೆ. ದುರ್ಯೋ ಧನ, ತಪ್ಪು ದಾರಿಯಿಂದ ಹಣ ಮಾಡುವವರು. ದು ಶಾಸನ, ಕೆಟ್ಟದಾಗಿ ಶಾಸನ ಮಾಡುವವರು, ಶಕುನಿ ಬುದ್ಧಿಯವರು ಮತ್ತು ಕರ್ಣನ ಹಾಗೆ ಎಲ್ಲಾ ಭ್ರಷ್ಟಾಚಾರ, ಅನಾಚಾರಗಳಿಗೆ ಚಪ್ಪಾಳೆ ತಟ್ಟುವವರು ಈಗಲೂ ಇದ್ದಾರೆ ಎಂದು ಇಂದಿನ ಸಮಾಜವನ್ನು, ರಾಜಕಾರಣವನ್ನು ಹಾಸ್ಯದ ಮೂಲಕವೇ ತಿವಿದರು.

ಎರಡನೇ ಸುತ್ತಿನಲ್ಲಿ ಮಾತನಾಡಿದ ರಾಮನಾಥರು, ಯಕ್ಷಪ್ರಶ್ನೆಗೆ ಈಗಿನ ಕಾಲದಲ್ಲಿ ಯಾವ ರೀತಿಯ ಉತ್ತರಗಳು ಬಂದೀತು ಅನ್ನುವುದರ ಅಣಕು ಉತ್ತರಗಳನ್ನು ಪ್ರಸ್ತುತಪಡಿಸಿದರು. ಗುಂಡೂರಾಯರು ಅರ್ಜುನನ ಏಕಾಗ್ರತೆಯ ಬಗ್ಗೆ ಮಾತನಾಡಿದರು. ಇಂದಿನ ಸಾಫ್ಟ್ ವೇರ್ ಇಂಜಿನಿಯರ್ ಗಳೂ ಅರ್ಜುನನ ಹಾಗೆಯೇ, ಅವರ ದೃಷ್ಟಿ ಬೇರೆ ಯಾವುದರ ಮೇಲೂ ಇರುವುದಿಲ್ಲ, ಕೇವಲ ಅಮೇರಿಕಾದ ಮೇಲೆಯೇ ಇರುತ್ತದೆ ಎಂದು ಪ್ರತಿಭಾ ಪಲಾಯನದ ಮೇಲೆ ಸಭೆಯ ಗಮನವನ್ನು ಸೆಳೆದರು. ಮಕ್ಕಳಿಗೂ ತಮ್ಮ ದೃಷ್ಟಿ ಎಲ್ಲಾ ವಿದ್ಯಾಭ್ಯಾಸದ ಮೇಲೆಯೇ ಇರಬೇಕು, ಅದಕ್ಕಾಗಿಯೇ ಅದನ್ನು ಕಣ್ ಸಂಟ್ರೇಶನ್ ಎನ್ನುವುದು. ಮಕ್ಕಳ ಕಿವಿ ಎಲ್ಲ ತಮ್ಮ ವಿದ್ಯಾಭ್ಯಾಸದ ಮೇಲೆಯೇ ಇರಬೇಕು, ಅದಕ್ಕಾಗಿಯೇ ಅದನ್ನು ಕಾನ್ ಸಂಟ್ರೇಶನ್ ಎನ್ನುವುದು ಎಂದು ಕಿವಿಮಾತು ಹೇಳಿದರು. ಸಭಿಕರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ ಇಬ್ಬರು ದಿಗ್ಗಜರೂ ರಸವತ್ತಾಗಿ ಉತ್ತರಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಬೆಂಗಳೂರು ಮಹಾನಗರ ಸಂಚಾಲಕರಾದ ಚಂದ್ರಶೇಖರರು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕಾರ್ಯಚಟುವಟಿಕೆಗಳು, ಮುಂದಿನ ಪಂಚತಂತ್ರದ ಬಗೆಗಿನ ಕಾರ್ಯಕ್ರಮದ ಸರಳ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಭಾನುರವರು ಮಾತನಾಡಿ, ಕಾರ್ಯಕ್ರಮದಿಂದ ತಮಗಾದ ಸಂತಸವನ್ನು ಹಂಚಿಕೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ಪದ್ಮಾ ಅನಂತ ಭಾರದ್ವಾಜರು ನಿರ್ವಹಿಸಿದರೆ, ಬಂದ ಅತಿಥಿಗಳನ್ನು ಸಮರ್ಥ ಕಾಂತಾವರರವರು ಸ್ವಾಗತಿಸಿದರು. ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ತುಂಬಿದ ಗೃಹದ ಕಾರ್ಯಕ್ರಮವೊಂದು ಯಶಸ್ವಿಯಾಗಿ ಸಂಪನ್ನವಾಯಿತು.

Leave a Reply

Your email address will not be published. Required fields are marked *