ಅಭಿವ್ಯಕ್ತಿ

         ಸಾಹಿತ್ಯಕ್ಷೇತ್ರದಲ್ಲಿ ಭಾರತೀಯ ದೃಷ್ಟಿಯನ್ನು ಪುನಃಸ್ಥಾಪಿಸುವ, ದೇಶದ ಬೌದ್ಧಿಕ ವಾತಾವರಣವನ್ನು ಸ್ವಸ್ಥಗೊಳಿಸುವ ಸಮಸ್ತ ಭಾರತೀಯ ಭಾಷೆಗಳ ನಡುವೆ ಸಾಹೋದರ್ಯಭಾವವನ್ನು ಜಾಗೃತಗೊಳಿಸುವ ಕಾರ್ಯೋದ್ದೇಶದಿಂದ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ 1966ರ ಅಕ್ಟೋಬರ್ 27ರಂದು ವಿಧ್ಯುಕ್ತವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಶ್ರೀ ಮಾಧವ ಮುಳೇ ಅವರ ಪ್ರೇರಣೆಯಿಂದ, ‘ನವಭಾರತ ಟೈಂಸ್’ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿದ್ದ ಸಾಹಿತಿ ಶ್ರೀ ರತ್ನಸಿಂಹ ಶಾಂಡಿಲ್ಯ ಅವರ ನೇತೃತ್ವದಲ್ಲಿ ಭಾರತೀಯತೆಯನ್ನು ಉಸಿರಾಡುವ ಕೆಲವು ಸಾಹಿತಿಗಳು ಸೇರಿ ಅಂದು ದಿಲ್ಲಿಯಲ್ಲಿ ಈ ಸಂಘಟನೆಯನ್ನು ಹುಟ್ಟುಹಾಕಿದರು. 

         1975ರಲ್ಲಿ ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಾಗ ‘ಅಭಾಸಾಪ’ದ ಕಾರ್ಯಕರ್ತರೂ ತತ್ಸಂಬಂಧೀ ಸಾಹಿತಿಗಳೂ ಒಟ್ಟಾಗಿ ಅದರ ವಿರುದ್ಧ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಕಠೋರ ಜೈಲುವಾಸವನ್ನೂ ಅನುಭವಿಸಿದರು. ನಿಷೇಧದಿಂದಾಗಿ ಆಗ ಸ್ಥಗಿತಗೊಂಡಿದ್ದ ‘ಅಭಾಸಾಪ’ದ ಕಾರ್ಯ ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುತ್ತ ಹೋಯಿತು. ದೇಶದಲ್ಲಿ ‘ಸಾಹಿತ್ಯಕ ಸ್ವರಾಜ್ಯ’ವನ್ನು ಗಳಿಸುವ ಉದ್ದೇಶದ ಅದರ ಕಾರ್ಯ 2015ರಿಂದೀಚೆಗೆ ಕರ್ನಾಟಕದಲ್ಲಿಯೂ ವೇಗಪಡೆಯುತ್ತಿದೆ. 

         ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ್ಯಾಸ್’ ಎಂಬ ನೋಂದಾಯಿತ ಸಂಸ್ಥೆಯಡಿ ‘ಅಭಾಸಾಪ’ದ ಕಾರ್ಯವು ದೇಶಾದ್ಯಂತ ನಡೆಯುತ್ತಿದೆ. ಇದು, ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ’ ಎಂಬ ಹೆಸರಿನಲ್ಲಿ ಕರ್ನಾಟಕದಲ್ಲಿಯೂ ನೋಂದಾವಣೆಯಾಗಿದೆ. 

         ಜೈನೇಂದ್ರ ಕುಮಾರ್, ಗೋವಿಂದಶಂಕರ ಕುರುಪ್, ಜಿ. ವಿ. ಸುಬ್ರಹ್ಮಣ್ಯಂ, ರಾಮನಾಥ ತ್ರಿಪಾಠಿ, ಭಂಡಾರು ಸದಾಶಿವ ರಾವ್, ಬಲವಂತ ಜಾನಿ ಮುಂತಾದ ಸಾಹಿತ್ಯ ದಿಗ್ಗಜರ ಅಧ್ಯಕ್ಷತೆಯಲ್ಲಿ ‘ಅಭಾಸಾಪ’ ಸಂಘಟನೆ ಬೆಳೆದಿದೆ. 

ಪ್ರಸ್ತುತ ಸಂಘಟನೆಯ ತೇರೆಳೆಯುತ್ತಿರುವವರು: 
ಅಧ್ಯಕ್ಷ: ಸುಶೀಲ್ ಚಂದ್ರ ತ್ರಿವೇದಿ ಲಕ್ನೋ 
ಪ್ರಧಾನ ಕಾರ್ಯದರ್ಶಿ: ಋಷಿಕುಮಾರ ಮಿಶ್ರಾ, ಮುಂಬೈ 
ಸಹ ಪ್ರಧಾನ ಕಾರ್ಯದರ್ಶಿ: ಶ್ರೀ ಪವನ ಪುತ್ರ ಬಾದಲ್, ಲಕ್ನೋ 
ಸಂಘಟನಾ ಕಾರ್ಯದರ್ಶಿ: ಶ್ರೀಧರ ಪರಾಡ್ಕರ್, ಗ್ವಾಲಿಯರ್