ಸಮಾಜಹಿತದ ಸಾಹಿತ್ಯವನ್ನು ರಚಿಸುವ ಸಾಹಿತಿಗಳನ್ನು ಗುರುತಿಸಿ ಸಮ್ಮಾನಿಸುವ ಕಾರ್ಯವನ್ನು ನಿಷ್ಪಕ್ಷಪಾತವಾಗಿ ಮಾಡುವ ಸಾಹಿತ್ಯ ಸಂಘಟನೆಯಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದೇಶದಲ್ಲಿ ಕೆಲಸಮಾಡುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಋಷಿ ಕುಮಾರ ಮಿಶ್ರಾ ಹೇಳಿದ್ದಾರೆ.
ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ನಡೆಯುತ್ತಿರುವ ‘ಅಭಾಸಾಪ’ದ ಮೂರು ದಿನಗಳ ಕಾರ್ಯಕರ್ತ ಪ್ರಬೋಧನ ಕಾರ್ಯಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಸಮಾಜವನ್ನು ಹಲವು ಹೋಳುಗಳಾಗಿ ವಿಭಜಿಸುವ ಉದ್ದೇಶವನ್ನೇ ಉಳ್ಳ ಪರಕೀಯ ಸಿದ್ಧಾಂತಗಳು ಸಾಹಿತ್ಯ ಕ್ಷೇತ್ರವನ್ನು ಪ್ರಭಾವಿಸಿರುವ ಕುರಿತು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಗರ ವಿಶ್ವವಿದ್ಯಾಲಯ ಪ್ರೊಫೆಸರ್ ಡಾ. ಬಲವಂತ ಜಾನಿ ಅವರು ಮಾತನಾಡಿ, ದೇಶವು ಭವಿಷ್ಯದಲ್ಲಿ ಯಾವುದನ್ನು ಅವಶ್ಯವಾಗಿ ಯೋಚಿಸಬೇಕಿದೆಯೋ ಅದನ್ನು ಮುಂಚಿತವಾಗಿಯೇ ತನ್ನ ಸಂಗೋಷ್ಠಿಗಳ ಮೂಲಕ ಚಿಂತನೆಯಾಗಿ ನೀಡುವ ಕಾರ್ಯವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಅಭಾಸಾಪ’ದ ರಾಷ್ಟ್ರೀಯ ಅಧ್ಯಕ್ಷ ಡಾ. ಸುಶೀಲಚಂದ್ರ ತ್ರಿವೇದಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಬೌದ್ಧಿಕ ಪ್ರಮುಖ್ ಶ್ರೀ ಸ್ವಾಂತರಂಜನ್, ಉಪಾಧ್ಯಕ್ಷ ಶ್ರೀ ಶ್ರೀರಾಮ ಪರಿಹಾರ, ಒರಿಸ್ಸಾ ರಾಜ್ಯದ ಅಧ್ಯಕ್ಷ ಡಾ. ದೇವೇಂದ್ರ ದಾಸ್, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ‘ಅಭಾಸಾಪ’ದಿಂದ ಪ್ರಕಾಶಿತವಾದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ದೇಶದೆಲ್ಲೆಡೆಯಿಂದ ಬಂದ ಇನ್ನೂರೈವತ್ತಕ್ಕೂ ಹೆಚ್ಚಿನ ಸಾಹಿತಿಗಳು ಮತ್ತು ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
‘ಅಭಾಸಾಪ’ದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ದಿನೇಶ ಪ್ರತಾಪ ಸಿಂಗ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ರಾತ್ರಿ ನಡೆದ ‘ಕಾವ್ಯಪಾಠ’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳೂ ‘ಅಭಾಸಾಪ ಕರ್ನಾಟಕ’ದ ನಿಕಟಪೂರ್ವ ಅಧ್ಯಕ್ಷರೂ ಆದ ಪ್ರೊ. ಪ್ರೇಮಶೇಖರ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಂದನ ಭಟ್, ರಾಜ್ಯ ಕಾರ್ಯದರ್ಶಿ ಶ್ರೀ ಶೈಲೇಶ್ ಮಂಗಳೂರು, ತುಮಕೂರು ವಿಭಾಗ ಸಂಯೋಜಕರಾದ ಶ್ರೀ ಅಶ್ವತ್ಥ ನಾರಾಯಣ, ಶಿವಮೊಗ್ಗ ವಿಭಾಗ ಸಂಯೋಜಕರಾದ ಶ್ರೀ ಶ್ರೀಹರ್ಷ ಹೊಸಳ್ಳಿ ಮತ್ತು ಮಂಗಳೂರು ವಿಭಾಗ ಸಂಯೋಜಕರಾದ ಶ್ರೀ ಸುಂದರ ಶೆಟ್ಟಿ ಅವರು ಉಪಸ್ಥಿತರಿದ್ದರು.