ಬೆಂಗಳೂರು: ರಗಳೆ ಸಾಹಿತ್ಯ ಇಡೀ ದೇಶದ ಭಾಷೆಗಳಲ್ಲಿ ಗಮನಿಸಿದರೆ ಸಿಗುವುದು ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ. ಮತ್ತೆ ನಮ್ಮ ಭಾಷೆಯ ಕವನ ಸಂಕಲನಗಳು ಮತ್ತು ಸಾಹಿತ್ಯ ಪುಸ್ತಕಗಳು ಶೀರ್ಷಿಕೆಯಿಂದಲೆ ಪ್ರಖ್ಯಾತಿ ಪಡೆದಿರುವುದು ವಿಶೇಷವಾಗಿದೆ ಎಂದು ಬೆಂಗಳೂರು ಮಹಾನಗರದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷ, ಖ್ಯಾತ ನಗೆ ಭಾಷಣಕಾರ, ಸಾಹಿತಿ ಎಂಎಸ್ ನರಸಿಂಹಮೂರ್ತಿ ತಿಳಿಸಿದರು.

ಶನಿವಾರ ಶಂಕರಪುರದ ಉತ್ತುಂಗ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ “ಕವನಗಳ ಕೈಬುಟ್ಟಿ” ಎನ್ನುವ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಎಂಎಸ್ ನರಸಿಂಹಮೂರ್ತಿ ಕನ್ನಡದ ಹಲವು ಉತ್ತಮ ಕವನ ಸಂಕಲನದ ರೀತಿಯಲ್ಲಿ ಕವನಗಳ ಕೈಬುಟ್ಟಿಯ ಮುಖಪುಟ ಆಕರ್ಷಕವಾಗಿ ಮೂಡಿ ಬಂದಿದೆ. ಕ್ರಾಂತಿಕಾರಿ, ನಾಡು, ನುಡಿ, ರಾಷ್ಟ್ರೀಯತೆ ಹೀಗೆ ಎಲ್ಲ ರೀತಿಯ ರಸಗಳನ್ನು ಈ ಕವನ ಸಂಕಲನದಲ್ಲಿ ಕಾಣಬಹುದು ಮತ್ತೆ ದೇಶಾಭಿಮಾನ ಮೂಡಿಸುವ ಪ್ರಯತ್ನ ಇರುವುದು ಶ್ಲಾಘನೀಯ. ಇದೇ ಮಾದರಿಯಲ್ಲಿ ಜನರ ಸಾಹಿತ್ಯಾಸಕ್ತಿ ಬೆಳಸುವ ಕಾರ್ಯವನ್ನು ಸದಾ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಡೆಸುತ್ತಿದೆ ಎಂದು ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕ ವಿ. ನಾಗರಾಜ್ ಮಾತನಾಡಿ ಇವತ್ತಿನ ಕಾರ್ಯಕ್ರಮ ಅತ್ಯಂತ ಸುಂದರವಾಗಿದೆ. ಇದಕ್ಕೆ ಅಖಿಲ ಭಾರತ ಸಾಹಿತ್ಯ ಪರಿಷತ್ ನ ಕರ್ನಾಟಕ ವಿಭಾಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈಗಿನ ಕಾಲದಲ್ಲಿ ಕವನ ರಚನೆ ಮತ್ತು ವಾಚನ ಅಪರೂಪವಾಗಿದೆ ಹೀಗಿರುವಾಗ ನಮ್ಮತವನ್ನು ಒಳಗೊಂಡು ಕವಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ಕನ್ನಡತನ ಮತ್ತು ರಾಷ್ಟ್ರೀಯತೆ ಕೂಡ ಇದರಲ್ಲಿ ಅಡಕವಾಗಿದೆ. ನಮ್ಮ ಮನಸ್ಸಿನಲ್ಲಿ ಅರಳಿಸುವ ಮತ್ತು ಬದಲಿಸುವ ಕವನಗಳು ಈಗಿನ ಅಗತ್ಯವಾಗಿದೆ ಅದನ್ನು ಈ ಕವನ ಸಂಕಲನ ಪೂರೈಸಿದೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಅಗತ್ಯತೆ ಇದ್ದು, ಇದಕ್ಕೆ “ಕವನಗಳ ಕೈಬುಟ್ಟಿ” ಉತ್ತಮ ಮುನ್ನುಡಿಯನ್ನು ಇಟ್ಟಿದೆ. ಇದರಲ್ಲಿನ ಕವಿತೆಗಳು ಹರಿಯುವ ನದಿಯಂತೆ ಭಾಸವಾಗುತ್ತಿದೆ. ಮನಸ್ಸು ಪರಿವರ್ತನೆಯನ್ನು ಮಾಡುವ ಶಕ್ತಿ ಇಲ್ಲಿ ಬರೆದಿರುವ ಕವನಗಳಿಗಿದೆ ಎಂದು ಅಭಿಪ್ರಾಯಪಟ್ಟರು.

ಕುವೆಂಪು, ಬಸವಣ್ಣ, ರಾಮಾನುಜರು ಸೇರಿದಂತೆ ಹಲವು ಮಹನೀಯರು ನಮ್ಮಲ್ಲಿ ಸಮಾನತೆಯನ್ನು ಸನಾತನ ಸಂಸ್ಕೃತಿಯನ್ನು ಮರಳಿ ತರಲು ಜನಮಾನಸವನ್ನು ಬಡಿದೆಬ್ಬಿಸಿದರು ಅವರಂತೆ ಲೇಖಕರು ಕವಿಗಳು ಸಹ ಈ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕವಿ, ಚಲನಚಿತ್ರ ಸಾಹಿತಿ ಪ್ರಮೋದ್ ಮರವಂತೆ ಮಾತನಾಡಿ ಬರಹಗಾರನಿಗೆ, ಕವಿಗಳಿಗೆ ಪುಸ್ತಕ ರೂಪದಲ್ಲಿ ಬರಬೇಕು ಎನ್ನುವುದು ಆಸೆಯಾಗಿರುತ್ತದೆ. ಇಂದು ಹಲವರ ಆಸೆ ಈಡೇರುತ್ತಿರುವುದಕ್ಕೆ ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ. ಇನ್ನಷ್ಟು ಪುಸ್ತಕ ಪರಂಪರೆ ಬೆಳಸಬೇಕಿರುವುದು ಈಗಿನ ಅಗತ್ಯತೆಯಾಗಿದೆ ಅದನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪೂರೈಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ಹೇಳಿದರು.

ಉದಯಭಾನು ಕಲಾ ಸಂಘದ ಸಂಸ್ಥೆ ಸಂಸ್ಥಾಪಕ ಮತ್ತು ಗೌರವ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ಮಾತನಾಡಿ ನೇರವಾಗಿ ಹೇಳದೆ ಹೇಳಬಲ್ಲದ್ದನ್ನು ತಿಳಿಸಲು ಸಾಧ್ಯವಿರುವುದು ಕಾವ್ಯದಲ್ಲಿ ಮಾತ್ರ. ಸರಳವಾಗಿ ಕ್ಲಿಷ್ಟವಾಗಿರುವ ವಿಚಾರವನ್ನು ಹೇಳಲು ಕಾವ್ಯಗಳ ಮೂಲಕ ಮಾತ್ರ ಸಾದ್ಯ ಎಂದು ಹೇಳಿದರು.

ಕಾರ್ಯ್ರಮದಲ್ಲಿ ಅಬಲಾಶ್ರಮದ ಮಕ್ಕಳು ಕವನ ವಾಚನ ಮಾಡಿದರು. ಎನ್ಮಾರ್ಕ್‌ ಟೆಕ್ನಾಲಜೀಸ್ ಸಂಸ್ಥಾಪಕ ಕೃಷ್ಣರಾಜ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *