ಸೆಪ್ಟೆಂಬರ್ ೯, ೨೦೨೩.
ಶಿರಸಿಯಲ್ಲಿ ಅಭಾಸಾಪ ವತಿಯಿಂದ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು. ಸ್ವರಾಜ್ಯ-ಸುರಾಜ್ಯ ಎಂಬ ವಿಷಯದ ಕುರಿತು ಆಗಸ್ಟ್ ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದಿದ್ದ ಇದೇ ವಿಷಯದ ಕವಿಗೋಷ್ಠಿಗಳಲ್ಲಿ ಬಹುಮಾನ ಗಳಿಸಿದ್ದ ಕವನಗಳನ್ನು ರಾಜ್ಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಉತ್ತಮವಾದ 25 ಕವನಗಳನ್ನು ಆಯ್ಕೆ ಮಾಡಿ ಸಂಬಂಧಿಸಿದ ಕವಿಗಳಿಗೆ ಶಿರಸಿಗೆ ಬಂದು ವಾಚಿಸುವಂತೆ ತಿಳಿಸಲಾಗಿತ್ತು. ಈ ಪೈಕಿ 21 ಕವಿಗಳು ಹಾಜರಾಗಿ ಕವನವಾಚನ ಮಾಡಿದರು.
ಕವಿಗೋಷ್ಠಿಯ ಉದ್ಘಾಟನೆಯನ್ನು ಪತ್ರಕರ್ತರು ಹಾಗೂ ಅಭಾಸಾಪ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ಹರಿಪ್ರಕಾಶ ಕೋಣೆಮನೆಯವರು ಮಾಡಿದರು. ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸ್ವರಾಜ್ಯ ಹಾಗೂ ಸುರಾಜ್ಯದ ಪರಿಕಲ್ಪನೆ ಏನು? ಹಿಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರ ವಹಿಸಿದವರು ಮುಂದೆ ಪ್ರಾಣವನ್ನೇ ಬಲಕೊಟ್ಟ ಕ್ರಾಂತಿಕಾರಿಗಳು. ಆದರೆ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಅದರ ಪ್ರಯೋಜನ ಪಡೆದದ್ದು ವಿಪರ್ಯಾಸ ಎಂದರು.
ನಂತರ ಕವಿಗಳಿಂದ ಕವಿತಾ ವಾಚನ ನಡೆಯಿತು. ಕಾರ್ಯಕ್ರಮದ ಕವಿತೆಗಳ ಅವಲೋಕನ ನಡೆಸಿದ ಶಿರಸಿಯ ಸಂಸ್ಕ್ರತ ಅಧ್ಯಾಪಕರು ಹಾಗೂ ಕವಿಗಳೂ ಆದ ಡಾ. ರಾಘವೇಂದ್ರ ರಾವ್ ಅವರು ಕವಿತೆಗಳಲ್ಲಿ ಶಬ್ದಾಡಂಬರಕ್ಕೆ ಮಹತ್ವಕೊಡಬಾರದು. ಕಾವ್ಯದಲ್ಲಿ ಲಯ ಸಿದ್ದಿ ಇರಬೇಕು. ಅಧ್ಯಯನ ಇಲ್ಲದ ಬರವಣಿಗೆ ವ್ಯರ್ಥ ಎನಿಸುತ್ತದೆ. ಪ್ರಶಸ್ತಿಗಾಗಿ ಕವನ ಬರೆಯುವುದು ಒಳ್ಳೆಯದಲ್ಲ. ಕವನ ಓದಿದಾಗ ಓದುಗನಿಗೆ ಭಾವ ಉಂಟಾಗಬೇಕು ಎಂದು ತಿಳಿಸಿದರು.
ಸಮಾರೋಪ ಭಾಷಣ ಮಾಡಿದ ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಂದನ ಭಟ್ಟರು ಸಾಹಿತ್ಯ ಬದುಕಿಗೆ ಸಂಬಂಧಿಸಿದ್ದಾಗಿರಬೇಕು. ಸುರಾಜ್ಯದ ಕಲ್ಪನೆಯನ್ನು ಛತ್ರಪತಿ ಶಿವಾಜಿ ನೀಡಿ, ಅದನ್ನು ಜಾರಿಗೆ ತಂದಿದ್ದರು. ಅಭಾಸಾಪ ನಡೆಸಿದ ಈ ಕವನದ ಅಭಿಯಾನ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.
ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ನಾರಾಯಣ ಶೇವಿರೆ ಆಭಾಸಾಪ ನಡೆಸಿದ ಈ ಕವಿಗೋಷ್ಠಿಗೆ ಬಂದಿದ್ದ ಕವನಗಳ ಮೌಲ್ಯಮಾಪನೆಯಾದ ಬಗ್ಗೆ ವಿವರಣೆ ನೀಡಿದರು.
ರಾಜ್ಯ ಮಟ್ಟದ ಈ ಕವಿಗೋಷ್ಠಿಯಲ್ಲಿ ಈ ಕೆಳಕಂಡವರ ಕವಿತೆಗಳು ಬಹುಮಾನ ಗಳಿಸಿದವು.
ಪ್ರಥಮ : ಪುಷ್ಪಾ ಭಟ್, ಶಿರಸಿ
ದ್ವಿತೀಯ : ಶೀಲಾ ಅರಕಲಗೂಡು, ಬೆಂಗಳೂರು
ತೃತೀಯ: ಮಂಜುನಾಥ ಮರವಂತೆ, ಉಡುಪಿ.
ಸಮಾಧಾನ ಬಹುಮಾನಗಳು:
ಮನೋಜ್ ಕುಮಾರ್, ದಾವಣಗೆರೆ
ಅವಿನಾಶ್ ಭಟ್. ಬೆಂಗಳೂರು
ಶ್ರೀವಾಣಿ ಕಾಕುಂಬೆ.
ಬಹುಮಾನಿತರಿಗೆ ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ವಿತರಣೆ ಮಾಡಲಾಯಿತು.